ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದೀಪ್ ಅವರಿಗೆ ಮಾಧ್ಯಮಗಳಿಂದ ‘ನೆಪೋಟಿಸಂ’ ಕುರಿತು ನೇರ ಪ್ರಶ್ನೆ ಎದುರಾಗಿದೆ. ಈ ವೇಳೆ ಸುದೀಪ್ ಹಾಗೂ ಸಂಚಿತ್ ಇಬ್ಬರೂ ಖಡಕ್ ಉತ್ತರ ನೀಡಿದ್ದು ಮೊದಲ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ಸಂಚಿತ್ ಸಂಜೀವ್ ನೆಪೋಟಿಸಂ ಕುರಿತು ಮಾತನಾಡಿ, ‘ನಾನು ಸಿನಿಮಾದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬುದು ನನ್ನ ನಂಬಿಕೆ. ಆ ಖುಷಿ ಈಗ ಎಲ್ಲರಿಗೂ ಕಾಣಿಸುತ್ತಿದೆ’ ಎಂದು ಸರಳವಾಗಿ ಉತ್ತರಿಸಿದರು. ನೆಪೋಟಿಸಂ ಬಗ್ಗೆ ಕೇಳಿದ ಪ್ರಶ್ನೆಗೆ ಸಖತ್ ಗರಂ ಆದ ಕಿಚ್ಚ ಸುದೀಪ್ ನೇರವಾಗಿಯೇ ಕೌಂಟರ್ ಕೊಟ್ಟರು ಎನ್ನಲಾಗಿದೆ.

ಹಾಗೂ ‘ಈ ಪ್ರಶ್ನೆಯನ್ನು ನೀವು ಎಲ್ಲರಿಗೂ ಕೇಳ್ತೀರಾ? ದೊಡ್ಮನೆಯಿಂದ ಇದು ಆರಂಭ ಆಯ್ತಲ್ಲ. ಶಿವಣ್ಣನಿಗೆ ಎಂದಾದರೂ ಈ ಪ್ರಶ್ನೆ ಕೇಳಿದ್ರಾ? ಅವರಿಗೆ ಯಾಕೆ ಕೇಳಿಲ್ಲ? ಕೇಳುವುದಾದರೆ ಪ್ರತಿಯೊಬ್ಬರಿಗೂ ಕೇಳಬೇಕು. ಅಂಬಾನಿ ಮಗನಿಗೆ ಯಾಕೆ ನೆಪೋಟಿಸಂ ಬಗ್ಗೆ ಕೇಳೋದಿಲ್ಲ’ ಎಂದು ಪ್ರಶ್ನಿಸಿದರು. ‘ವರನಟ ಡಾ. ರಾಜ್ಕುಮಾರ್ ಅವರ ಸಮಯದಿಂದಲೂ ಕುಟುಂಬದವರಿಗೆ ಆ ಯೋಗ್ಯತೆ ಮತ್ತು ಅರ್ಹತೆ ಇದ್ದು, ಕನ್ನಡ ಜನತೆ ಇಷ್ಟಪಟ್ಟರೆ ಮಾತ್ರ ಉಳಿದುಕೊಳ್ಳುತ್ತಾರೆ. ಇದು ಯಾರಪ್ಪನ ಜಾಗವೂ ಅಲ್ಲ. ದೊಡ್ಮನೆಯಿಂದ ಬಂದ ಶಿವಣ್ಣ ಹಾಗೂ ಅಪ್ಪು ಅವರಿಂದ ಎಷ್ಟೋ ಜನಕ್ಕೆ ಒಳ್ಳೇದಾಗಿದೆ. ಅದಕ್ಕೆ ಅವರಲ್ಲಿರುವ ಪ್ರತಿಭೆ ಕಾರಣವೇ ಹೊರತು ನೆಪೋಟೀಸಮ್ ಅಲ್ಲ’ ಎಂದರು.

ತಮ್ಮ ಕುಟುಂಬದ ಉದಾಹರಣೆ ನೀಡಿದ ಸುದೀಪ್, ‘ನಂಗೆ ನನ್ನ ಅಪ್ಪ ಇದ್ದಾರೆ, ಅವನಿಗೆ ಮಾವನಾಗಿ ನಾನು ಇದ್ದೀನಿ. ನನ್ನ ಮಗಳಿಗೆ ಸಿಂಗಿಂಗ್ ಅಲ್ಲಿ ಇಂಟ್ರೆಸ್ಟ್ ಇತ್ತು ಅದಕ್ಕೆ ಬಂದಿದ್ದಾಳೆ. ಇವನಿಗೆ (ಸಂಚಿತ್) ಆಕ್ಟಿಂಗ್ ಇಷ್ಟ ಇತ್ತು ಬಂದಿದ್ದಾನೆ. ನಮ್ಮ ಮನೆಯಲ್ಲಿ ಇನ್ನು ತುಂಬಾ ಜನ ಅಕ್ಕನ ಮಕ್ಕಳೆಲ್ಲ ಇದ್ದಾರೆ, ಅವರು ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ’ ಎಂದರು. ‘ಕನ್ನಡ ಚಿತ್ರರಂಗದಲ್ಲಿ ನೆಪೋಟೀಸಂ ಅನ್ನೋ ಪ್ರಶ್ನೆಯೇ ಬರೋದಿಲ್ಲ. ಆ ಬಾಲಿವುಡ್ ಪ್ರಶ್ನೆಯನ್ನು ತಂದು ಇಲ್ಲಿ ಕೇಳಬೇಡಿ. ಇಲ್ಲಿ ಕಲೆ ಇದ್ರೆ ಮಾತ್ರ ಬೆಳೆಯಲು ಸಾಧ್ಯ’ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ನೆಪೋಟಿಸಂ ಚರ್ಚೆಗೆ ಮುಕ್ತಾಯ ಹಾಡಿದ್ದಾರೆ ಎನ್ನಲಾಗುತ್ತಿದೆ.
















