ಶಿವಮೊಗ್ಗ: ದೇಶದ ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ‘ಮಾಕ್ ಡ್ರಿಲ್’ ನಡೆಸಿತು. 2026ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರಿಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯದ ಸೂಚನೆಯನ್ವಯ ಜಿಲ್ಲಾ ಮಟ್ಟದಲ್ಲಿ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಯಿತು. ಹಾಗೂ ಬಹುಮಹಡಿ ಕಟ್ಟಡ ಮತ್ತು ಶಾಲಾ ಸಮುಚ್ಚಯಕ್ಕೆ ವೈಮಾನಿಕ ಅಣಕು ಪ್ರದರ್ಶನದ ಆರಂಭದಲ್ಲಿ ಶತ್ರುಗಳ ವಾಯುದಾಳಿಯ ಮುನ್ಸೂಚನೆ ನೀಡುವಂತೆ ‘ಕೋಡ್ ರೆಡ್’ ಎಚ್ಚರಿಕೆಯ 2 ನಿಮಿಷಗಳ ಸೈರನ್ ಮೊಳಗಿಸಲಾಯಿತು ಎನ್ನಲಾಗಿದೆ.

ನಂತರ ತಕ್ಷಣವೇ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ಆರಂಭವಾಯಿತು. ದಾಳಿಯಿಂದ ಕಟ್ಟಡಗಳು ಧರಾಶಾಯಿಯಾದಾಗ ಸಾರ್ವಜನಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ಅವಶೇಷಗಳಡಿ ಸಿಲುಕಿದವರನ್ನು ಹುಡುಕಿ ರಕ್ಷಿಸುವುದು ಹಾಗೂ ಗಾಯಾಳುಗಳಿಗೆ ತಕ್ಷಣವೇ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ, ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವ, ನಂತರ ಸ್ಥಳ ಪರಿಶೀಲನೆ ಕೈಗೊಳ್ಳುವ ಐಇಡಿ ಲಭ್ಯವಾಗಿದ್ದು, ಬಾಂಬ್ ಕಿಲ್ಲರ್ ಅನ್ನು ತೆಗೆದು ಸೇಫ್ ಡಿಸ್ಪೋಸಲ್ ಏರಿಯಾಗೆ ತರಲಾದ ಹಾಗೂ ಬಿಡಿಎಸ್ ಅಧಿಕಾರಿಗಳು ಮತ್ತು ಸೋಕೋ ತಂಡ ಕಾರ್ಯಾಚರಣೆ ಕುರಿತು ಉನ್ನತ ಅಧಿಕಾರಿಗಳಿಗೆ ವರದಿ ನೀಡುವ ಹಾಗೂ ಉನ್ನತ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಆದೇಶಿದ ಪ್ರಾತ್ಯಕ್ಷಿಕೆ ನಡೆಸಲಾಯಿತು. ಸಶಸ್ತ್ರ ದುಷ್ಕರ್ಮಿಗಳು ನಿಯಂತ್ರಣಕ್ಕೆ ಪಡೆದು, ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂಬ ತುರ್ತು ಸಂದೇಶ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತು. ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಕಮಾಂಡೋ ಮಾದರಿಯ ಶಸ್ತ್ರಸಜ್ಜಿತ ಪಡೆ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿತು. ಇಡೀ ಬಸ್ ನಿಲ್ದಾಣದ ಆವರಣವನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ, ತಕ್ಷಣವೇ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಿದರು.

ಮತ್ತು ದುಷ್ಕರ್ಮಿಗಳೊಂದಿಗೆ ಸಂಧಾನ ನಡೆಸುವ ನಾಟಕೀಯ ಸನ್ನಿವೇಶದ ನಡುವೆಯೇ, ಮತ್ತೊಂದೆಡೆ ಅತ್ಯಂತ ಜಾಣ್ಮೆಯಿಂದ ಬಸ್ಸಿನ ಹಿಂಬಾಗಿಲು ಮತ್ತು ಕಿಟಕಿಗಳ ಮೂಲಕ ಒಳನುಗ್ಗಿದ ವಿಶೇಷ ಕಮಾಂಡೋ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳನ್ನು ಹಿಡಿದು, ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ಅತ್ಯಂತ ಯಶಸ್ವಿಯಾಗಿ ರಕ್ಷಿಸಲಾಯಿತು.ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಮಾಕ್ ಡ್ರಿಲ್ ಉದ್ದೇಶವಾಗಿದೆ. ಎಲ್ಲಾ ನೌಕರರು ವಾಸ್ತವದಂತೆ ಪ್ರದರ್ಶಿಸಿದ್ದೀರಿ. ಇಲಾಖೆಗಳ ಸಮನ್ವಯತೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಭಾಗವಹಿಸಿದ ಎಲ್ಲರಿಗೆ ಧನ್ಯವಾದಗಳು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಮಾತನಾಡಿ, ತುರ್ತು ಪರಿಸ್ಥಿತಿ, ವಿಪತ್ತು ಎದುರಾದಾಗ ಇಲಾಖೆಗಳ ಸನ್ನದ್ದತೆ ಮತ್ತು ಸಾರ್ವಜನಿಕರ ಸಹಕಾರ ಸಮನ್ವಯತೆ ಅಗತ್ಯವಾಗಿದ್ದು, ಅತ್ಯಂತ ವಾಸ್ತವವಾಗಿ ಅಣಕು ಪ್ರದರ್ಶನ ಮಾಡಲಾಗಿದೆ. ಪ್ರದರ್ಶನದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್ಸಿಸಿ ಸೇರಿದಂತೆ 300 ಜನರು ಪಾಲ್ಗೊಂಡಿದ್ದು ಸಹಕರಿಸಿದ ಎಲ್ಲ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರಿಗೆ ವಂದನೆ ತಿಳಿಸಿದರು ಎನ್ನಲಾಗುತ್ತಿದೆ.
















