ಮನೆ ಸುದ್ದಿ ಜಾಲ ರಾಯಚೂರು : ಹಾಸ್ಟೆಲ್‌ ವಾರ್ಡನ್ ನಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ

ರಾಯಚೂರು : ಹಾಸ್ಟೆಲ್‌ ವಾರ್ಡನ್ ನಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ

0

ರಾಯಚೂರು (ಜೂನ್ 06) : ಕಡು ಬಡತನದ ಹಿನ್ನೆಲೆಯಿಂದ ಬಂದು, ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ವಸತಿ ನಿಲಯಗಳನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೊಂದು ಭೀಕರ ಅನ್ಯಾಯ ನಡೆದಿದೆ. ಜಿಲ್ಲೆಯ  ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸಿದ್ದಾರೆ. ಹಸಿವಿನ ನೋವು ತಾಳಲಾರದೇ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳ ನೂರಾರು ಬಡ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಕಳೆದ ಮೂರು ದಿನಗಳಿಂದ ಇಲ್ಲಿ ಒಂದು ಹೊತ್ತಿನ ಊಟವಾಗಲಿ ಅಥವಾ ಕುಡಿಯುವ ನೀರಾಗಲಿ ಸಿಕ್ಕಿಲ್ಲ. ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಕೈಲಿದ್ದ ಅಲ್ಪಸ್ವಲ್ಪ ಹಣದಲ್ಲೇ ಹೋಟೆಲ್‌ನಲ್ಲಿ ತಿಂದಿದ್ದಾರೆ. ಹಣ ಖಾಲಿಯಾದ ಮೇಲೆ ವಿಧಿಯಿಲ್ಲದೇ ಪಕ್ಕದ ಮತ್ತೊಂದು ಹಾಸ್ಟೆಲ್‌ಗೆ ತೆರಳಿ, ಅಲ್ಲಿನ ಮಕ್ಕಳ ಬಳಿ ಆಹಾರ ಕೇಳಿ ಪಡೆದು ಹಸಿವು ನೀಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಾಗೂ ಬಿರು ಬಿಸಿಲಿನ ನಡುವೆಯೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಧರಣಿ ಕುಳಿತ ವಿದ್ಯಾರ್ಥಿಗಳು, ನಮಗೆ ಅನ್ನ ಕೊಡಿ, ನೀರು ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ವಿದ್ಯಾರ್ಥಿಗಳ ಈ ದುಸ್ಥಿತಿಗೆ ಹಾಸ್ಟೆಲ್ ವಾರ್ಡನ್ ಮೆಹಬೂಬ್ ಎಂಬಾತನೇ ನೇರ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ. ವಾರ್ಡನ್ ತಾನೇ ಖುದ್ದಾಗಿ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಹಾಸ್ಟೆಲ್ ಆರಂಭವಾಗಿದೆ, ಬನ್ನಿ ಎಂದು ಕರೆಸಿಕೊಂಡಿದ್ದನು. ಆದರೆ ಮಕ್ಕಳು ಬಂದ ಮೇಲೆ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನೀವು ಯಾರಿಗೆ ಬೇಕಾದರೂ ದೂರು ಕೊಡಿ, ಡಿಸಿಗೆ  ಬೇಕಾದರೂ ಹೇಳಿ, ಡಿಡಿಗೆ ಬೇಕಾದರೂ ಹೇಳಿ ಎಂದು ಉಡಾಫೆಯಾಗಿ ಉತ್ತರಿಸಿದ್ದಾನೆ ಎಂದು ವಿದ್ಯಾರ್ಥಿ ವಿಕಾಸ್ ರಾಠೋಡ್ ಆರೋಪಿಸಿದ್ದಾರೆ.

ಆದರೆ ವಿದ್ಯಾರ್ಥಿಗಳು ಇಲಾಖೆಯ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಂತೆ ಎಚ್ಚೆತ್ತ ವಾರ್ಡನ್ ಮೆಹಬೂಬ್ ದಿಢೀರನೆ ಸ್ಥಳದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ನಮಗೆ ಇಂತಹ ಬೇಜವಾಬ್ದಾರಿ ವಾರ್ಡನ್ ಬೇಡವೇ ಬೇಡ, ತಕ್ಷಣ ಇವನನ್ನು ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.