ಮನೆ ಸುದ್ದಿ ಜಾಲ ಶಿವಮೊಗ್ಗ : ಖಾಸಗಿ ಬಸ್ ಬೀಕರ ಅಗ್ನಿ ಅನಾಹುತ , ತಪ್ಪಿದ ದುರಂತ

ಶಿವಮೊಗ್ಗ : ಖಾಸಗಿ ಬಸ್ ಬೀಕರ ಅಗ್ನಿ ಅನಾಹುತ , ತಪ್ಪಿದ ದುರಂತ

0

ಶಿವಮೊಗ್ಗ: ಶಿವಮೊಗ್ಗ- ಉಡುಪಿ ಗಡಿಯ ಹುಲಿಕಲ್ (ಬಾಳೆಬರೇ) ಘಾಟಿಯಲ್ಲಿ ಖಾಸಗಿ ಬಸ್‌ಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಆದೃಷ್ಟವಶಾತ್, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಶ್ರೀ ದುರ್ಗಾಂಬಾ ಎಂಬ ಖಾಸಗಿ ಬಸ್ ಘಾಟಿಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಬಸ್ಸಿನಲ್ಲಿದ್ದವರೆಲ್ಲರೂ ತಕ್ಷಣವೇ ಹೊರಗಡೆ ಬಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತಯೇ ಸ್ಥಳಕ್ಕೆ ಹೊಸನಗರ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಹಾಗೂ ಬಸ್​ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕುರಿತು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಘಾಟಿಯಲ್ಲಿ ಕೆಲಕಾಲ ಸಂಚಾರಕ್ಕೆ ತಡೆ ಉಂಟಾಗಿತ್ತು. ಇತ್ತೀಚೆಗೆ ಹಾಸನದಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್​ನ ಟೈರ್ ಸ್ಫೋಟಗೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿತ್ತು. ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದ ಬಸ್​ನಲ್ಲಿದ್ದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

ಆದರೆ, ಲಗೇಜ್ ಹಾಗೂ ಮೊಬೈಲ್ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಕೂದಲೆಳೆ ಅಂತರದಲ್ಲಿ ಎಲ್ಲರೂ ಪಾರಾಗಿದ್ದರು. ಇದಕ್ಕೂ ಮುನ್ನ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ದೇವರಗುಡ್ಡ ಗ್ರಾಮದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಾರಿಗೆ ಬಸ್ ಹೊತ್ತಿ ಉರಿದಿತ್ತು. ಬಸ್ ಬೆಂಗಳೂರಿನಿಂದ ಗದಗಕ್ಕೆ ಹೊರಟಿತ್ತು. ಬಸ್‌ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಹಾಸಪಟ್ಟಿದ್ದರು. ಚಾಲಕ ಪಕ್ಕೀರಪ್ಪ ಅವರ ಸಮಯ ಪ್ರಜ್ಞೆಯಿಂದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು ಎನ್ನಲಾಗುತ್ತಿದೆ.