2026ರ ಮಹಿಳಾ ಟಿ20 ವಿಶ್ವಕಪ್ ಬಳಿಕ ನಿವೃತ್ತಿಯಾಗಲಿದ್ದೀರಾ ಎಂಬ ಪ್ರಶ್ನೆಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಖಡಕ್ ಪ್ರತಿಕ್ರಿಯೆ ನೀಡಿದ್ದು, ಅವರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಶೈಲಿಯನ್ನು ನೆನಪಿಸುವ ರೀತಿಯಲ್ಲಿ ಅವರು ವರದಿಗಾರರ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.
ಜೂನ್ 12ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಮುನ್ನ ಭಾನುವಾರ ಲಂಡನ್‌ನಲ್ಲಿ ನಡೆದ ಕ್ಯಾಪ್ಟನ್ಸ್ ಕಾರ್ನಿವಲ್ ಕಾರ್ಯಕ್ರಮದಲ್ಲಿ ಹರ್ಮನ್‌ಪ್ರೀತ್ ಕೌರ್ ಭಾಗವಹಿಸಿದ್ದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು, “ಇದು ನಿಮ್ಮ ಕೊನೆಯ ವಿಶ್ವಕಪ್ ಆಗಲಿದೆಯೇ?” ಎಂದು ಪ್ರಶ್ನಿಸಿದರು.
ಆಗ ಹರ್ಮನ್‌ಪ್ರೀತ್ ಕೌರ್ ಮೊದಲು, “ಏಕೆ?” ಎಂದು ಪ್ರತಿಪ್ರಶ್ನೆ ಮಾಡಿದರು. ಬಳಿಕ ವರದಿಗಾರರು, “ಸುಮ್ಮನೆ ಕೇಳಿದೆ” ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹರ್ಮನ್‌ಪ್ರೀತ್, “ನಾನು ಈಗಲೇ ನಿಲ್ಲಿಸಬೇಕು ಎಂದು ನೀವು ಭಾವಿಸುತ್ತೀರಾ?” ಎಂದು ಕೇಳಿದರು. ಅದಕ್ಕೆ ವರದಿಗಾರರು “ಖಂಡಿತ ಇಲ್ಲ” ಎಂದು ಉತ್ತರಿಸಿದಾಗ, “ಹಾಗಾದರೆ ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ?” ಎಂದು ಅವರು ನಗುತ್ತಲೇ ತಿರುಗೇಟು ನೀಡಿದರು.

ಧೋನಿ ಶೈಲಿಯಲ್ಲಿ ನಡೆದ ಸಂಭಾಷಣೆ
ವರದಿಗಾರ: “ಇದು ನಿಮ್ಮ ಕೊನೆಯ ವಿಶ್ವಕಪ್ ಆಗಲಿದೆಯೇ?”
ಹರ್ಮನ್‌ಪ್ರೀತ್ ಕೌರ್: “ಏಕೆ?”
ವರದಿಗಾರ: “ಸುಮ್ಮನೆ ಕೇಳಿದೆ.”
ಹರ್ಮನ್‌ಪ್ರೀತ್ ಕೌರ್: “ನಾನು ನಿಲ್ಲಿಸಬೇಕು ಎಂದು ನೀವು ಭಾವಿಸುತ್ತೀರಾ?”
ವರದಿಗಾರ: “ಖಂಡಿತ ಇಲ್ಲ.”
ಹರ್ಮನ್‌ಪ್ರೀತ್ ಕೌರ್: “ಹಾಗಾದರೆ ನೀವು ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ?”
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರಶಸ್ತಿಯತ್ತ ಮುನ್ನಡೆಸಿದ ಬಳಿಕ ಹರ್ಮನ್‌ಪ್ರೀತ್ ಕೌರ್ ಅವರ ನಿವೃತ್ತಿ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ 37 ವರ್ಷದ ಅವರು ದೇಶಕ್ಕಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಇಚ್ಛೆ ಹೊಂದಿದ್ದು, ಸದ್ಯಕ್ಕೆ ನಿವೃತ್ತಿಯ ಯಾವುದೇ ಯೋಜನೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ 2009ರಲ್ಲಿ ಏಕದಿನ ಹಾಗೂ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ಭಾರತೀಯ ಮಹಿಳಾ ತಂಡದ ಅತ್ಯಂತ ಹಿರಿಯ ಆಟಗಾರ್ತಿಯಾಗಿರುವ ಅವರು, ಏಕದಿನ ಮತ್ತು ಟಿ20 ಎರಡೂ ಮಾದರಿಗಳಲ್ಲಿ 4,000ಕ್ಕೂ ಹೆಚ್ಚು ರನ್ ಗಳಿಸಿದ್ದು, ತಂಡದ ಪ್ರಮುಖ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಜೂನ್ 14ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಗ್ರೂಪ್-ಎಯಲ್ಲಿ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.













