ಮನೆ ಸುದ್ದಿ ಜಾಲ ‘ಸಿಬಿಐ ಸಮಯಕ್ಕೆ ಬಂದಿರಲಿಲ್ಲ ಅಂದರೆ ನನ್ನ ಎನ್ಕೌಂಟರ್ ಆಗುತ್ತಿತ್ತು’ : ಉತ್ತರ ಪ್ರದೇಶ ಪೊಲೀಸರ ವಿರುದ್ಧ...

‘ಸಿಬಿಐ ಸಮಯಕ್ಕೆ ಬಂದಿರಲಿಲ್ಲ ಅಂದರೆ ನನ್ನ ಎನ್ಕೌಂಟರ್ ಆಗುತ್ತಿತ್ತು’ : ಉತ್ತರ ಪ್ರದೇಶ ಪೊಲೀಸರ ವಿರುದ್ಧ ರಾಜ್ ಸಿಂಗ್ ಗಂಭೀರ ಆರೋಪ

0

‘ಸಿಬಿಐ ಬರದಿದ್ದರೆ ನನ್ನ ಎನ್‌ಕೌಂಟರ್ ಆಗುತ್ತಿತ್ತು! ಉತ್ತರಪ್ರದೇಶ ಪೊಲೀಸರ ವಿರುದ್ಧ ರಾಜ್ ಸಿಂಗ್ ಶಾಕಿಂಗ್ ಹೇಳಿಕೆ

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ನಡೆದ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರಕಾಂತ್ ರಥ ಹತ್ಯೆ ಪ್ರಕರಣವು ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಜ್ ಕುಮಾರ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಚಂದ್ರಕಾಂತ್ ರಥ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆದರೆ ನಂತರ ನಡೆದ ಸವಿಸ್ತಾರ ತನಿಖೆಯಲ್ಲಿ ಬಂಧಿತ ವ್ಯಕ್ತಿ ನಿಜವಾದ ಆರೋಪಿ ಅಲ್ಲ ಎಂಬ ಸಂಗತಿ ಬಹಿರಂಗವಾಗಿದೆ.

ತಪ್ಪು ಗುರುತಿನ ಆಧಾರದ ಮೇಲೆ ಬಂಧನಕ್ಕೊಳಗಾದ ರಾಜ್ ಸಿಂಗ್ ಇದೀಗ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ನನ್ನನ್ನು ಎನ್ಕೌಂಟರ್ ಮಾಡಲಾಗುತ್ತಿತ್ತು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯ ಮತ್ತು ಪೊಲೀಸ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ರಾಜ್ ಸಿಂಗ್ ಹೇಳುವ ಪ್ರಕಾರ, ಅವರು ತಮ್ಮ ತಾಯಿಯೊಂದಿಗೆ ಅಯೋಧ್ಯೆಗೆ ದರ್ಶನಕ್ಕೆ ತೆರಳಿದ್ದರು. ಮನೆಗೆ ಮರಳಿ ಬಂದಾಗ ಮನೆಯ ಬಳಿ ಪೊಲೀಸರು ಕಾಯುತ್ತಿದ್ದರು. ಯಾವುದೇ ಸ್ಪಷ್ಟನೆ ಕೇಳದೇ ತಮ್ಮನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ. “ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ. ನಾನು ಏನು ಮಾಡಿದ್ದೇನೆ ಎಂದು ಕೇಳುವುದಕ್ಕೂ ಮುನ್ನ ನನ್ನನ್ನು ಅಪರಾಧಿಯಂತೆ ನಡೆಸಿಕೊಂಡರು” ಎಂದು ಅವರು ಆರೋಪಿಸಿದ್ದಾರೆ.

ಬಂಧನದ ಬಳಿಕ ತಮ್ಮನ್ನು ಕೋಲ್ಕತ್ತಾಗೆ ಕರೆದೊಯ್ಯಲಾಗಿತ್ತು ಎಂದು ರಾಜ್ ಸಿಂಗ್ ತಿಳಿಸಿದ್ದಾರೆ. ಅಲ್ಲಿ ಸಿಐಡಿ ಅಧಿಕಾರಿಗಳು ತಾನು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದರು ಎಂದು ಹೇಳಿದ್ದಾರೆ. “ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆಯಲು ಯತ್ನಿಸಿದರು. ತನಿಖಾ ಸಂಸ್ಥೆಗಳ ಉದ್ದೇಶ ಸತ್ಯ ಪತ್ತೆಹಚ್ಚುವುದು ಅಲ್ಲ, ನನ್ನನ್ನು ತಪ್ಪಿತಸ್ಥನಾಗಿ ತೋರಿಸುವುದೇ ಆಗಿತ್ತು” ಎಂದು ರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎನ್ಕೌಂಟರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ತಾನು ಕೂಡ ಅಂತಹ ಪರಿಸ್ಥಿತಿಗೆ ಒಳಗಾಗಬಹುದೆಂಬ ಭಯದಲ್ಲಿದ್ದೆ ಎಂದು ಅವರು ಹೇಳಿದ್ದಾರೆ. “ಪ್ರತಿ ರಾತ್ರಿ ಪೊಲೀಸರು ಕರೆದುಕೊಂಡು ಹೋಗಿ ಎನ್ಕೌಂಟರ್ ಮಾಡಿಬಿಡಬಹುದು ಎಂಬ ಆತಂಕ ಕಾಡುತ್ತಿತ್ತು. ಪೊಲೀಸರನ್ನು ಯಾರು ಹೆದರುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.

ನಂತರ ಸಿಬಿಐ ತನಿಖೆ ಮುಂದುವರಿದ ವೇಳೆ, ಪ್ರಕರಣದ ನಿಜವಾದ ಮಾಹಿತಿ ಹೊರಬಂದಿತು. ಬಂಧಿತನಾದ ರಾಜ್ ಸಿಂಗ್ ಈ ಪ್ರಕರಣದಲ್ಲಿ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂಬುದು ದೃಢಪಟ್ಟಿತು. ಬಳಿಕ ಸಿಬಿಐ ಅವರನ್ನು ಬಿಡುಗಡೆ ಮಾಡಿತು. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದ ಸಿಬಿಐ ಅಧಿಕಾರಿಗಳಿಗೆ ರಾಜ್ ಸಿಂಗ್ ಧನ್ಯವಾದ ತಿಳಿಸಿದ್ದಾರೆ.

ಈ ಘಟನೆ ಬಳಿಕ ರಾಜ್ ಸಿಂಗ್ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಪ್ಪು ಬಂಧನ ಹಾಗೂ ಮಾನಸಿಕ ಹಿಂಸೆ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ನಾನು ಮತ್ತು ನನ್ನ ಕುಟುಂಬ ಭಾರತೀಯ ಜನತಾ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದೇವೆ. ನನ್ನ ತಂದೆಯೂ ಕ್ಷತ್ರಿಯ ಮಹಾಸಭಾದ ಸದಸ್ಯರಾಗಿದ್ದರು. ಆದರೂ ಸಂಕಷ್ಟದ ಸಮಯದಲ್ಲಿ ಯಾರೂ ನೆರವಿಗೆ ಬಂದಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.