ಮನೆ ಸುದ್ದಿ ಜಾಲ ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ :  ಎಮ್ಮೀ ಗ್ರೂಪ್

ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ :  ಎಮ್ಮೀ ಗ್ರೂಪ್

0

ಬೆಂಗಳೂರು (ಜೂನ್ 8) : ಬೆಂಗಳೂರು ಮೂಲದ ಪ್ರಮುಖ ಹಸಿರು ಇಂಧನ ಸಂಸ್ಥೆಯಾದ ಎಮ್ಮೀ ಗ್ರೂಪ್ ಬೆಂಗಳೂರಿನ ದೇವನಹಳ್ಳಿಯಲ್ಲಿ ಬರೋಬ್ಬರಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ ‘ಗಿಗಾ ಫ್ಯಾಕ್ಟರಿ’  ಸ್ಥಾಪಿಸಲು ಮುಂದಾಗಿದೆ. ಈ ಹೊಸ ಪ್ಲಾಂಟ್ ಸದ್ಯದ ಫ್ಯಾಕ್ಟರಿಗಿಂತ 5 ಪಟ್ಟು ದೊಡ್ಡದಾಗಿದ್ದು, ಸುಮಾರು 100 ಎಕರೆ ಪ್ರದೇಶದಲ್ಲಿ ವಿಸ್ತರಿಸಲಿದೆ. ಸಂಸ್ಥೆಯ ಛೇರ್ಮನ್ ಡಿ.ವಿ. ಮಂಜುನಾಥ ದೊಂತಿ ಅವರು ಸ್ವತಃ ಈ ಮಾಹಿತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.  1992ರಲ್ಲಿ ಭಾರತದ ಮೊದಲ ಸೋಲಾರ್ ವಾಟರ್ ಹೀಟರ್ಸ್ ತಯಾರಿಸಿದ ಸಾಧನೆ ಹೊಂದಿರುವ ಎಮ್ವೀ ಗ್ರೂಪ್, ಭಾರತದ ಅಗ್ರಗಣ್ಯ ಸೋಲಾರ್ ಮಾಡ್ಯೂಲ್ ತಯಾರಿಸುವ ಕಂಪನಿ. ಇದೀಗ ದೇವನಹಳ್ಳಿಯ ಹೊಸ ಘಟಕದಲ್ಲಿ ಇಂಗಾಟ್ಸ್ ಮತ್ತು ಸಿಲಿಕಾನ್ ವೇಫರ್​ಗಳನ್ನು ತಯಾರಿಸಲಿದೆ. ಸೋಲಾರ್ ಮಾಡ್ಯೂಲ್​ಗಳ ತಯಾರಿಕೆಯಲ್ಲಿ ಈ ಇಂಗಾಟ್ಸ್ ಮತ್ತು ವೇಫರ್​ಗಳು ಪ್ರಮುಖ ಕಚ್ಛಾ ವಸ್ತುಗಳೆನಿಸಿವೆ. ಹೀಗಾಗಿ, ದೇವನಹಳ್ಳಿಯ 5,500 ಕೋಟಿ ರೂ ಹೂಡಿಕೆಯಲ್ಲಿ ಎಮ್​ವೀ ಗ್ರೂಪ್ ನಿರ್ಮಿಸುತ್ತಿರುವ ಬೃಹತ್ ಗಿಗಾ ಫ್ಯಾಕ್ಟರಿಯು ಭಾರತದ ಸೋಲಾರ್ ಸ್ವಾವಲಂಬನೆಯಲ್ಲಿ ಪ್ರಮುಖ ಕೊಂಡಿ ಎಂದು ಬಣ್ಣಿಸಲಾಗುತ್ತಿದೆ ಎನ್ನಬಹುದು .

ಹಾಗೂ  ಭಾರತದಲ್ಲಿ ಸದ್ಯಕ್ಕೆ ಸೋಲಾರ್ ಪ್ಯಾನಲ್‌ಗಳನ್ನು ತಯಾರಿಸಿದರೂ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಎಮ್ಮೀ ಗ್ರೂಪ್ 2028ರ ವೇಳೆಗೆ ಈ ಗಿಗಾ ಫ್ಯಾಕ್ಟರಿಯಲ್ಲಿ ಸ್ವತಃ ಅತ್ಯಂತ ಪ್ರಮುಖವಾದ ‘ಸಿಲಿಕಾನ್ ವೇಫರ್ಸ್’ ಮತ್ತು ‘ಇಂಗಾಟ್ಸ್’ ಉತ್ಪಾದನೆ ಆರಂಭಿಸಲಿದೆ. ಇದರಿಂದ ಭಾರತದ ಸೌರಶಕ್ತಿ ಕ್ಷೇತ್ರಕ್ಕೆ ದೊಡ್ಡ ಬಲ ಸಿಗಲಿದೆ. ಸದ್ಯಕ್ಕೆ ಸಂಸ್ಥೆಯು 2.9 ಗಿಗಾವ್ಯಾಟ್ (GW) ಸೋಲಾರ್ ಸೆಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಮಾರ್ಚ್ 2027ರ ವೇಳೆಗೆ ಇದನ್ನು 8.90 ಗಿಗಾವ್ಯಾಟ್‌ಗೆ (ಸುಮಾರು ಮೂರು ಪಟ್ಟು) ಹೆಚ್ಚಿಸಲಿದೆ. ಸೋಲಾರ್ ಮಾಡ್ಯೂಲ್ ಉತ್ಪಾದನೆಯನ್ನು ಈ ವರ್ಷದ (2026) ಡಿಸೆಂಬರ್ ವೇಳೆಗೆ 10.3 ಗಿಗಾವ್ಯಾಟ್‌ನಿಂದ 16.3 ಗಿಗಾವ್ಯಾಟ್‌ಗೆ ಏರಿಸಲಾಗುವುದು. ಈ 5,500 ಕೋಟಿ ರೂ ಯೋಜನೆಯಲ್ಲಿ 40% ರಷ್ಟು (2,200 ಕೋಟಿ ರೂ.) ಮೊತ್ತವನ್ನು ಕಂಪನಿಯು ತನ್ನ ಸ್ವಂತ ಈಕ್ವಿಟಿ ಮೂಲಕ ಹೂಡಿಕೆ ಮಾಡುತ್ತಿದೆ. ಉಳಿದ 3,300 ಕೋಟಿ ರೂಪಾಯಿ ಸಾಲವನ್ನು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ನೀಡುತ್ತಿದೆ. ಸಂಸ್ಥೆಯು ಸಂಪೂರ್ಣವಾಗಿ ಶೂನ್ಯ ಸಾಲದ (Zero-debt) ಕಂಪನಿಯಾಗಿದೆ ಎಂದು ಮಂಜುನಾಥ ದೊಂತಿ ತಿಳಿಸಿದ್ದಾರೆ. ಚೀನಾ ಸೋಲಾರ್ ಪ್ಯಾನಲ್‌ಗಳಿಗೆ ಹೋಲಿಸಿದರೆ ಎಮ್ಮೀ ಸಂಸ್ಥೆಯ ಉತ್ಪನ್ನಗಳ ‘ಕ್ಲೈಮ್ ರೇಶಿಯೋ’ ಕೇವಲ 0.008 ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಹಾಗೂ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

ಆದರಿಂದ  ಚೀನಾ ಬೇರೆ ಮಟ್ಟದಲ್ಲಿದೆ. ಅದರ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಇತರ ದೇಶಗಳಿಗೆ ಸರಿಗಟ್ಟಲು ಆಗುವುದಿಲ್ಲ. ಎಲ್ಲಾ ಕಚ್ಚಾ ವಸ್ತು ಸ್ಥಳೀಯವಾಗಿಯೇ ಲಭ್ಯವಾದರೆ, ಮತ್ತು ಚೀನೀ ಕಂಪನಿಗಳಿಗೆ ಸಿಗುವಂತಹ ರೀತಿಯ ರಕ್ಷಣೆ ನಮಗೂ ಸಿಕ್ಕರೆ ನಾವೂ ಕೂಡ ಬೆಲೆ ವಿಚಾರದಲ್ಲಿ ಚೀನೀ ಉತ್ಪನ್ನಗಳನ್ನು ಮೀರಿಸಬಲ್ಲೆವು. ಸರ್ಕಾರ ಹಣಕಾಸು ಬೆಂಬಲ ನೀಡದಿದ್ದರೂ ಚಿಂತೆ ಇಲ್ಲ, ಆದರೆ, ಅಪಾಯ ಎದುರಿಸಲು ಸರ್ಕಾರದ ವಿಶ್ವಾಸ ಅಗತ್ಯ ಇದೆ ಎಂದು ಎಮ್​ವೀ ಗ್ರೂಪ್​ನ ಛೇರ್ಮನ್ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಸಂದರ್ಶನದಲ್ಲಿ ತಿಳಿಸಿದ್ದಾರೆ. 1992 ರಲ್ಲೇ ‘ಸೋಲಾರೈಜರ್’ (Solarizer) ಬ್ರ್ಯಾಂಡ್ ಅಡಿಯಲ್ಲಿ ದೇಶದ ಮೊದಲ ಸೋಲಾರ್ ವಾಟರ್ ಹೀಟರ್ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. 2006 ರಲ್ಲಿ ಸೋಲಾರ್ ಪವರ್ ಉತ್ಪಾದನೆ ಆರಂಭಿಸಿದಾಗ ಭಾರತದಲ್ಲಿ ಮಾರುಕಟ್ಟೆ ಇಲ್ಲದ ಕಾರಣ 2014 ರವರೆಗೆ ತನ್ನ 100% ಉತ್ಪನ್ನಗಳನ್ನು ಯುರೋಪ್ (ಮುಖ್ಯವಾಗಿ ಜರ್ಮನಿ) ದೇಶಗಳಿಗೆ ರಫ್ತು ಮಾಡುತ್ತಿತ್ತು. ಆದರೆ ಈಗ ಭಾರತ ಸರ್ಕಾರ ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ, ದೇಶಿಯ ಮಾರುಕಟ್ಟೆಯಲ್ಲೇ ಇವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈ ಗಿಗಾ ಫ್ಯಾಕ್ಟರಿ ಆರಂಭವಾಗುವುದರಿಂದ ಬೆಂಗಳೂರಿನ ದೇವನಹಳ್ಳಿ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಹಾಗೂ ಭಾರತವು ಸೌರಶಕ್ತಿ ವಲಯದಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ನೆರವಾಗಲಿದೆ ಎನ್ನಲಾಗುತ್ತಿದೆ.