ಬೆಂಗಳೂರು: ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಐದು ವರ್ಷದ ಮಗಳನ್ನು ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವ ಪ್ರಕರಣದ ಒದೊಂದೇ ಕಥೆಗಳು ಹೊರಬರುತ್ತಿದೆ. ಇದೀಗ ಮಗು ಸಾವನ್ನಪ್ಪಿದ ಕೇವಲ 15 ದಿನಗಳಲ್ಲೇ, ಯಾವುದೇ ಪಶ್ಚಾತ್ತಾಪವಿಲ್ಲದೆ ಈ ಜೋಡಿ ಮಲ್ಲೇಶ್ವರಂ ದೇವಸ್ಥಾನಕ್ಕೆ ಒಟ್ಟಿಗೆ ತೆರಳಿ ದೇವರ ದರ್ಶನ ಪಡೆದಿತ್ತು. ಈ ಸಬಂಧ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೈಕೈ ಹಿಡಿದುಕೊಂಡು ಈ ಜೋಡಿ ದೇವಾಲಯಕ್ಕೆ ಎಂಟ್ರಿ ಕೊಡುತ್ತಿರುವುದು ಕಾಣಿಸಿದೆ. ಚಿಕ್ಕಬನಹಳ್ಳಿ ನಿವಾಸಿ ವೆನ್ನೆಲಾ (5) ಹತ್ಯೆಯಾದ ದುರ್ದೈವಿ ಮಗು. ಪ್ರಕರಣ ಸಂಬಂಧ ಮೃತಳ ತಾಯಿಯ ಪ್ರಿಯಕರ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದು, ತಾಯಿ ಪ್ರಿಯಾಂಕ ಪರಾರಿಯಾಗಿದ್ದಾಳೆ. ಆಕೆಯ ಪತ್ತೆಗೆ ಕಾಡುಗೋಡಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನಗೊಂಡ ತಂದೆ ಪ್ರವೀಣ್, ಮರಣೋತ್ತರ ಪರೀಕ್ಷಾ ವರದಿಯನ್ನು ವಿದೇಶದಲ್ಲಿ ವೈದ್ಯೆಯಾಗಿರುವ ತನ್ನ ಸಹೋದರಿಗೆ ಕಳುಹಿಸಿ ಅಭಿಪ್ರಾಯ ಕೇಳಿದ್ದರು. ಮಗು ಸಹಜವಾಗಿ ಸಾವಿಗೀಡಾಗಿಲ್ಲ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರವೀಣ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುಟ್ಟೂರು ಗ್ರಾಮದಲ್ಲಿ ಖಾಸಗಿ ಶಾಲೆ ನಡೆಸುತ್ತಿದ್ದು, 2007ರಲ್ಲಿ ಹೊಸಕೋಟೆಯ ಪ್ರಿಯಾಂಕಳನ್ನು ವಿವಾಹವಾಗಿದ್ದರು. ದಂಪತಿಗೆ ಇಶಿಕಾ ಮತ್ತು ವೆನ್ನೆಲಾ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಪ್ರಿಯಾಂಕಳಿಗೆ ಕಾಲೇಜು ದಿನಗಳಲ್ಲಿ ಪರಿಚಿತನಾಗಿದ್ದ ಮೋಹನ್ ಎಂಬಾತನೊಂದಿಗೆ ಮತ್ತೆ ಸಂಪರ್ಕ ಬೆಳೆದಿತ್ತು. ಜಮೀನು ವ್ಯಾಜ್ಯ ವಿಚಾರವಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಈ ಪರಿಚಯ ಮತ್ತಷ್ಟು ಗಾಢವಾಗಿದ್ದು, ಬಳಿಕ ಅದು ಪ್ರೇಮ ಸಂಬಂಧಕ್ಕೆ ತಿರುಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮಾ.24ರಂದು ರಾತ್ರಿ ಮಗಳಿಗೆ ಬಿರಿಯಾನಿ ತಿನ್ನಿಸಿದ್ದೆ, ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ಹೇಳಿದ್ದಾಳೆ. ಇದಕ್ಕೂ ಮುನ್ನ ಐಸ್‌ಕ್ರೀಮ್ ತಿನ್ನಿಸಿ ಕಾರಿನಲ್ಲಿ ಮಲಗಿಸಿದ್ದೆ ಎಂದೂ ಹೇಳಿದ್ದಾಳೆ. ಈ ರೀತಿಯ ಪರಸ್ಪರ ಗೊಂದಲ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿತ್ತು. ಮೋಹನ್ ಜೊತೆಗಿನ ಮೋಜಿನ ಜೀವನ ಹಾಗೂ ಖಾಸಗಿ ಕ್ಷಣಗಳಿಗೆ 5 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗುತ್ತಿದ್ದಳು. ಜೊತೆಗೆ ಮಗು ಕಪ್ಪಗಿದ್ದಾಳೆ ಎಂಬ ಅಸಮಾಧಾನವೂ ತಾಯಿಗಿತ್ತು ಎನ್ನಲಾಗಿದೆ. ಮಾರ್ಚ್ 24ರ ರಾತ್ರಿ ಮಗುವಿಗೆ ಐಸ್‌ಕ್ರೀಮ್ ತಿನ್ನಿಸಿ, ಕಾರಿನಲ್ಲಿ ಎಸಿ ಹಾಕಿ ಮಲಗಿಸಲಾಗಿತ್ತು. ಆ ನಂತರ ಮನೆಗೆ ತಂದು ಬಿರಿಯಾನಿ ತಿನ್ನಿಸಲಾಗಿತ್ತು. ಮಾರ್ಚ್ 25 ರಂದು ಬೆಳಗ್ಗೆ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಿಯಾಂಕಳ ಸಹೋದರ ರಾಘವೇಂದ್ರ ತಕ್ಷಣ ಪತಿ ಪ್ರವೀಣ್‌ಗೆ ಕರೆ ಮಾಡಿ ವೈದೇಹಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋದಾಗ ಮಗಳ ಸಾವಿನ ಸುದ್ದಿ ತಿಳಿದಿದೆ. “ರಾತ್ರಿ ಬಿರಿಯಾನಿ ತಿಂದಿದ್ದಾಳೆ, ಬೆಳಗ್ಗೆ ನೋಡುವಷ್ಟರಲ್ಲಿ ಮೃತಪಟ್ಟಿದ್ದಾಳೆ” ಎಂದು ಪ್ರಿಯಾಂಕ ಎಲ್ಲರ ಹಾದಿ ತಪ್ಪಿಸಲು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಳು. ಮಗಳ ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ ತಂದೆ ಪ್ರವೀಣ್, ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯನ್ನು ಇಂಗ್ಲೆಂಡ್‌ನಲ್ಲಿ ಮಕ್ಕಳ ತಜ್ಞೆಯಾಗಿರುವ ತನ್ನ ಅಕ್ಕ ಡಾ. ಪೂರ್ಣಿಮಾ ಪಾಂಡೆ ಅವರಿಗೆ ಕಳುಹಿಸಿಕೊಟ್ಟಿದ್ದರು. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಡಾ. ಪೂರ್ಣಿಮಾ, “ಇದು ಸಹಜ ಸಾವಲ್ಲ, ಮಗುವಿಗೆ ಏನೋ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದರಿಂದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡು” ಎಂದು ಸಲಹೆ ನೀಡಿದ್ದರು. ಸಹೋದರಿಯ ಮಾರ್ಗದರ್ಶನದಂತೆ ಪ್ರವೀಣ್ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. “ನನ್ನ ಪತ್ನಿ ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮೋಹನ್, ತಮ್ಮ ಮೋಜಿನ ಬದುಕಿಗೆ ಅಡ್ಡಿಯಾಗಿದ್ದಾಳೆ ಎಂಬ ಏಕೈಕ ಕಾರಣಕ್ಕೆ ಮಗುವಿನ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ” ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದರು. ಮೋಹನ್ ಈಗಾಗಲೇ ವಿವಾಹಿತನಾಗಿದ್ದು, ಅವನಿಗೂ ಮೂವರು ಮಕ್ಕಳಿದ್ದಾರೆ. ಇಬ್ಬರೂ ತಮ್ಮ ತಮ್ಮ ಸಂಗಾತಿಗಳಿಂದ ವಿಚ್ಛೇದನ ಪಡೆಯದೇ ಲಿವ್-ಇನ್ ಸಂಬಂಧದಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಾಂಕ ಮತ್ತು ಮೋಹನ್ ದುಬೈ ಪ್ರವಾಸ ಸೇರಿದಂತೆ ಹಲವು ಕಡೆಗಳಿಗೆ ಒಟ್ಟಿಗೆ ತೆರಳಿದ್ದರು. ದುಬೈನಲ್ಲಿ ದುಬಾರಿ ಉಡುಗೊರೆಗಳನ್ನು ನೀಡಿದ್ದ ಮೋಹನ್, ಕಾಶಿಯಲ್ಲಿ ಮದುವೆಯಾಗಿದ್ದೇವೆ ಎಂದು ಪ್ರಿಯಾಂಕ ಹೇಳಿದ್ದಾಳೆ. ಡಿಸೆಂಬರ್ 27 ಏಕಾಂಗಿ ಪ್ರವಾಸ ಎಂದು ಸುಳ್ಳು ಹೇಳಿ ಮೋಹನ್ ಜೊತೆ ಪ್ರಿಯಾಂಕ ಕಾಶಿಗೆ ತೆರಳಿ ಮದುವೆಯಾಗಿದ್ದಳು ಎಂದು ಪ್ರವೀಣ್ ಆರೋಪಿಸಿದ್ದಾರೆ. ಮಗು ಕಪ್ಪು ಬಣ್ಣದಲ್ಲಿದ್ದಾಳೆ ಎಂಬ ಕಾರಣಕ್ಕೂ ಪ್ರಿಯಾಂಕ ಅಸಮಾಧಾನಗೊಂಡಿದ್ದಾಳೆ ಎಂಬ ಮಾಹಿತಿಯೂ ಇದೆ. ಮಗು ಸಾವಿಗೀಡಾದ ಸುಮಾರು 15 ದಿನಗಳ ನಂತರ ಪ್ರಿಯಾಂಕ ಮತ್ತು ಮೋಹನ್ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಮೋಹನ್ ಬಂಧನವಾಗಿದ್ದು, ಪರಾರಿಯಾಗಿರುವ ಪ್ರಿಯಾಂಕ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಪ್ರಕರಣದ ನಿಖರ ಕಾರಣ ಮತ್ತು ಇತರೆ ವಿವರಗಳು ಮುಂದಿನ ತನಿಖೆಯಲ್ಲಿ ಬೆಳಕಿಗೆ ಬರಲಿವೆ ಎಂದು ಮಾಹಿತಿ ತಿಳಿದುಬಂದಿದೆ.













