ಮನೆ ಸುದ್ದಿ ಜಾಲ ಅರ್ಜೆಂಟೀನಾದಲ್ಲಿ 10 ವರ್ಷದ ಗುತ್ತಿಗೆ ಪಡೆದ ಅದಾನಿ ಪೋರ್ಟ್ಸ್

ಅರ್ಜೆಂಟೀನಾದಲ್ಲಿ 10 ವರ್ಷದ ಗುತ್ತಿಗೆ ಪಡೆದ ಅದಾನಿ ಪೋರ್ಟ್ಸ್

0

ನವದೆಹಲಿ (ಜೂನ್ 8) : ಭಾರತದ ಅತಿದೊಡ್ಡ ಖಾಸಗಿ ಸಮಗ್ರ ಸಾರಿಗೆ ನಿರ್ವಹಣೆ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ , ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ದಕ್ಷಿಣ ಅಮೆರಿಕಾದ ಮಾರುಕಟ್ಟೆಗೆ ಮೊದಲ ಪ್ರವೇಶ ಪಡೆದಿದೆ. ಅದಾನಿ ಪೋರ್ಟ್ಸ್ ಸಂಸ್ಥೆಯು ಅರ್ಜೆಂಟೀನಾದಲ್ಲಿ 10 ವರ್ಷಗಳ ಸುದೀರ್ಘ ಅವಧಿಯ ಎಲ್‌ಎನ್‌ಜಿ ಸಾಗಣೆ ಮತ್ತು ಮರೈನ್ ಸೇವೆಗಳ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಒಪ್ಪಂದದೊಂದಿಗೆ ಅದಾನಿ ಪೋರ್ಟ್ಸ್ ದಕ್ಷಿಣ ಅಮೆರಿಕಾ ಖಂಡದಲ್ಲಿ ತನ್ನ ಮೊದಲ ವ್ಯವಹಾರವನ್ನು ಆರಂಭಿಸುತ್ತಿದೆ. ಇದು ಕಂಪನಿಯ ಜಾಗತಿಕ ವಿಸ್ತರಣಾ ಯೋಜನೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಅದಾನಿ ಪೋರ್ಟ್ಸ್​ನ ಅಂಗಸಂಸ್ಥೆಯಾದ ಅದಾನಿ ಹಾರ್ಬರ್ ಇಂಟರ್​ನ್ಯಾಷನಲ್ ಮತ್ತು ಅರ್ಜೆಂಟೀನಾದ ಮೆರಿಡಿಯನ್ ಗ್ರೂಪ್ ಜೊತೆಗೂಡಿ ರಚಿಸಲಾದ ಸಮೂಹಕ್ಕೆ ಈ ಗುತ್ತಿಗೆ ಸಿಕ್ಕಿದೆ ಎನ್ನಲಾಗಿದೆ.

ಹಾಗೂ ಅರ್ಜೆಂಟೀನಾದ ಬಂದರುಗಳಲ್ಲಿ ಎಲ್‌ಎನ್‌ಜಿ ಹಡಗುಗಳಿಗೆ ಅಗತ್ಯವಿರುವ ಕಡಲ ಸೇವೆಗಳನ್ನು ಅದಾನಿ ಪೋರ್ಟ್ಸ್ ಒದಗಿಸಲಿದೆ. ಇದು 10 ವರ್ಷಗಳ ದೀರ್ಘಾವಧಿಯ ಒಪ್ಪಂದವಾಗಿದ್ದು, ಕಂಪನಿಗೆ ಸ್ಥಿರವಾದ ಆದಾಯವನ್ನು ತಂದುಕೊಡಲಿದೆ. ಅದಾನಿ ಪೋರ್ಟ್ಸ್ ಈಗಾಗಲೇ ಭಾರತದಲ್ಲಿ ಬಂದರು ನಿರ್ವಹಣೆ, ಟಗ್‌ಬೋಟ್‌ಗಳು ಮತ್ತು ಪೈಲಟೇಜ್ ಸೇವೆಗಳಲ್ಲಿ ಅಪಾರ ಅನುಭವ ಹೊಂದಿದೆ. ಇದೇ ನೈಪುಣ್ಯತೆಯನ್ನು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ವಯಿಸಲಾಗುತ್ತಿದೆ.

ಈ ಸುದ್ದಿಯ ಬೆನ್ನಲ್ಲೇ ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಹೂಡಿಕೆದಾರರಲ್ಲಿ ಸಂಸ್ಥೆಯ ಜಾಗತಿಕ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೆಚ್ಚಿದೆ. ಅದಾನಿ ಪೋರ್ಟ್ಸ್ ಕೇವಲ ಭಾರತಕ್ಕೆ ಸೀಮಿತವಾಗದೆ, ಶ್ರೀಲಂಕಾ, ಇಸ್ರೇಲ್ ಮತ್ತು ಇದೀಗ ಅರ್ಜೆಂಟೀನಾದಂತಹ ದೇಶಗಳಲ್ಲಿ ತನ್ನ ಜಾಲವನ್ನು ವಿಸ್ತರಿಸುತ್ತಿರುವುದು, ಜಾಗತಿಕ ಬಂದರು ನಿರ್ವಹಣಾ ಕ್ಷೇತ್ರದಲ್ಲಿ ಭಾರತದ ಕಂಪನಿಯೊಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಸೂಚಿಸುತ್ತದೆ. ಈ ಒಪ್ಪಂದವು ಕಂಪನಿಯು ಎಲ್‌ಎನ್‌ಜಿ ಮತ್ತು ಇಂಧನ ಸಾಗಣೆ ವಲಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.