ಬೆಳಗಾವಿ: ಬೆಳಗಾವಿಯ ಶಿವಾನಂದ ನೀಲಣ್ಣನವರ್ ಒಡೆತನದ ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಐಡಿ ಅಧಿಕಾರಿಗಳು ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾದ ಹಣದ ಒಂದು ಭಾಗವನ್ನು ಶಿವಾನಂದ ನೀಲಣ್ಣನವರ್ ಸನ್ನಿ ಲಿಯೋನ್ ಸೇರಿದಂತೆ ಹಲವು ನಟ-ನಟಿಯರಿಗೆ ವರ್ಗಾವಣೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಅವರು, ‘ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಸಾರ್ವಜನಿಕರ ಹಣವನ್ನು ಚಿತ್ರ ನಟಿಯರಿಗೆ ನೀಡಿರುವ ಕುರಿತು ನಮಗೆ ಸ್ಪಷ್ಟ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಸನ್ನಿ ಲಿಯೋನ್ ಸೇರಿದಂತೆ ಹಣ ಸ್ವೀಕರಿಸಿರುವ ಇತರ ನಟ-ನಟಿಯರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ಹೇಳಿದರು.

ಆರೋಪಿ ಶಿವಾನಂದ ನೀಲಣ್ಣವರ ಒಟ್ಟು 40,700 ಹೂಡಿಕೆದಾರರಿಂದ ಸುಮಾರು 2,400 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ. ಇವರಲ್ಲಿ ಸುಮಾರು 10,000 ಹೂಡಿಕೆದಾರರು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಗಳನ್ನು ಆತ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ 170 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಈ ವಂಚನೆ ಜಾಲವನ್ನು ನಿರ್ವಹಿಸಲು ಆತ ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಿದ್ದು, ಕೇವಲ ಒಂದು ಖಾತೆಯಲ್ಲೇ 36,200 ಪುಟಗಳಷ್ಟು ವಹಿವಾಟಿನ ದಾಖಲೆ ಇರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ತಿಳಿಸಿದರು.














