ಚಿಕ್ಕಮಗಳೂರು, ಜೂನ್ 10: ಸರ್ಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಮಧ್ಯರಾತ್ರಿ ಯುವಕನೊಬ್ಬ ನುಗ್ಗಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಹಾಸ್ಟೆಲ್ ಆವರಣದಲ್ಲಿ ಅಪರಿಚಿತ ಯುವಕನನ್ನು ಕಂಡ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ರಾಕೇಶ್ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯರು ವಾಸಿಸುತ್ತಿರುವ ಈ ಮೆಡಿಕಲ್ ಕಾಲೇಜಿನ ಹಾಸ್ಟೆಲ್ನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಸಹ ಇಂತಹ ಘಟನೆಗಳು ನಡೆದಿದ್ದರೂ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಮೆಡಿಕಲ್ ಕಾಲೇಜಿನ ಡೀನ್ ಪೊಲೀಸರಿಗೆ ದೂರು ನೀಡಿದ್ದು, ಹಾಸ್ಟೆಲ್ ಭದ್ರತೆ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಾಕೇಶ್ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿರುವುದು ತಿಳಿದುಬಂದಿದೆ. ಹಾಸ್ಟೆಲ್ನೊಳಗೆ ನುಗ್ಗಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿನಿಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರಿಂದ ತಪ್ಪಿಸಿಕೊಂಡು ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದ ವೇಳೆ, ಕಳ್ಳತನ ಮಾಡುವ ಉದ್ದೇಶದಿಂದ ಹಾಸ್ಟೆಲ್ಗೆ ಹೋಗಿದ್ದಾಗಿ ರಾಕೇಶ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದಲ್ಲದೆ, ಈ ಹಿಂದೆ ಕೂಡ ಆರೋಪಿ ರಾಕೇಶ್ ಹಾಸ್ಟೆಲ್ಗೆ ನುಗ್ಗಿದ್ದ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದ್ದು, ಮತ್ತೊಮ್ಮೆ ಇದೇ ರೀತಿಯ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
















