ಮನೆ ಸುದ್ದಿ ಜಾಲ ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ವೈದ್ಯಕೀಯ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ವೈದ್ಯಕೀಯ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ

0

ಗಾಂಧಿನಗರ (ಜೂನ್ 12) : ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ AI-171 ವಿಮಾನ ದುರಂತದ ಕಹಿ ನೆನಪಿಗೆ ಈಗ ಒಂದು ವರ್ಷ ತುಂಬಿದೆ. ಈ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಂತ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದೆ. 260 ಮಂದಿ ಪ್ರಾಣ ಕಳೆದುಕೊಂಡ ದುರಂತದ ಆ ಜಾಗವನ್ನು ಈಗ ಭವಿಷ್ಯದ ವೈದ್ಯರನ್ನು ರೂಪಿಸುವ, ಜೀವ ಉಳಿಸುವ ಪವಿತ್ರ ಶೈಕ್ಷಣಿಕ ಕೇಂದ್ರವನ್ನಾಗಿ ಮರು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಬಿಜೆ ವೈದ್ಯಕೀಯ ಕಾಲೇಜಿನ ಹಳೆಯ ಹಾಸ್ಟೆಲ್ ಸಂಕೀರ್ಣಕ್ಕೆ ವಿಮಾನ ಡಿಕ್ಕಿ ಹೊಡೆದಿದ್ದ ಸ್ಥಳದಲ್ಲಿ, ಹಳೆಯ ಶಿಥಿಲಗೊಂಡ ರಚನೆಗಳನ್ನು ಕೆಡವಿ ಹೊಸ ಆಧುನಿಕ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು ಜತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಭೆಯ ವಿವರಗಳನ್ನು ಹಂಚಿಕೊಂಡ ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ, ಆ ಸ್ಥಳದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಪವಿತ್ರ ಕೆಲಸವಾಗಿದೆ ಎನ್ನಲಾಗಿದೆ.

ಹಾಗೂ ಭವಿಷ್ಯದಲ್ಲಿ ಇಲ್ಲಿ ಸಾವಿರಾರು ವೈದ್ಯರು ವಿದ್ಯಾಭ್ಯಾಸ ಮಾಡಿ ರೋಗಿಗಳ ಸೇವೆ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಇದಕ್ಕಿಂತ ಉತ್ತಮ ಗೌರವ ಬೇರೊಂದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಮೇ 27 ರಂದು ಔಪಚಾರಿಕವಾಗಿ ಘೋಷಿಸಲಾದ ಈ ಪುನರಾಭಿವೃದ್ಧಿ ಯೋಜನೆಯಡಿ, ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ಇತರ ಸೌಲಭ್ಯಗಳು: ವಿಶಾಲವಾದ ಡೈನಿಂಗ್ ಮೆಸ್, ಆಧುನಿಕ ಜಿಮ್ನಾಷಿಯಂ, ಮನರಂಜನಾ ಪ್ರದೇಶಗಳು ಮತ್ತು ಆಕರ್ಷಕ ರಸ್ತೆ ಹಾಗೂ ತೋಟದ ವಿನ್ಯಾಸ. ಈ ಬೃಹತ್ ಯೋಜನೆಗೆ ಏರ್ ಇಂಡಿಯಾ ಆರ್ಥಿಕ ನೆರವು ನೀಡುತ್ತಿದ್ದು, ಗುಜರಾತ್ ಸರ್ಕಾರವು ಹೆಚ್ಚುವರಿ ಹಣವನ್ನು ಒದಗಿಸುತ್ತಿದೆ.

ದುರಂತದ ನಂತರದ ಕಠಿಣ ದಿನಗಳಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಮತ್ತು ವಿಧಿವಿಜ್ಞಾನ ತಂಡಗಳು ತೋರಿದ ಕರ್ತವ್ಯನಿಷ್ಠೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದ್ದಾಗ, ಈ ತಂಡಗಳು ಹಗಲಿರುಳು ಶ್ರಮಿಸಿ ಡಿಎನ್‌ಎ (DNA) ಪರೀಕ್ಷೆಗಳ ಮೂಲಕ ಅತ್ಯಂತ ಸೂಕ್ಷ್ಮವಾಗಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕಾರ್ಯ ಮಾಡಿದ್ದವು. ಆ ಕರಾಳ ದಿನಕ್ಕೆ ಒಂದು ವರ್ಷವಾಗುತ್ತಿದ್ದು,   ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಅಗಲಿದ ಆತ್ಮಗಳ ಚಿರಶಾಂತಿಗಾಗಿ ವಿಶೇಷ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ. ಒಂದು ಕಡೆ ಅಪಘಾತದ ತನಿಖೆ ಮತ್ತು ಪರಿಹಾರ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಮತ್ತೊಂದೆಡೆ ದುರಂತ ಸಂಭವಿಸಿದ ಜಾಗದಲ್ಲೇ ನೂರಾರು ಜೀವಗಳನ್ನು ಉಳಿಸುವ ವೈದ್ಯರ ವಸತಿ ನಿಲಯ ತಲೆಯೆತ್ತುತ್ತಿರುವುದು ಜಗತ್ತಿಗೆ ಮಾನವೀಯತೆಯ ವಿಶಿಷ್ಟ ಸಂದೇಶವನ್ನು ಸಾರುತ್ತಿದೆ ಎಂದು ತಿಳಿದುಬಂದಿದೆ.