ಮನೆ ಸುದ್ದಿ ಜಾಲ ಮುತ್ತಪ್ಪ ರೈ ಪುತ್ರನ ಮತ್ತೊಂದು ಪುಂಡಾಟದ ವಿಡಿಯೋ ವೈರಲ್: ಸೈಲೆನ್ಸರ್‌ನಿಂದ ಬೆಂಕಿ ಉಗುಳುತ್ತಾ ಏರ್ಪೋರ್ಟ್ ರಸ್ತೆಯಲ್ಲಿ...

ಮುತ್ತಪ್ಪ ರೈ ಪುತ್ರನ ಮತ್ತೊಂದು ಪುಂಡಾಟದ ವಿಡಿಯೋ ವೈರಲ್: ಸೈಲೆನ್ಸರ್‌ನಿಂದ ಬೆಂಕಿ ಉಗುಳುತ್ತಾ ಏರ್ಪೋರ್ಟ್ ರಸ್ತೆಯಲ್ಲಿ ಕಾರು ರೇಸಿಂಗ್

0

ಬೆಂಗಳೂರು, ಜೂನ್ 13: ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಡ್ರಿಫ್ಟಿಂಗ್ ಮಾಡಿ ಸುದ್ದಿಯಾಗಿದ್ದ ಇದೇ ಕಾರು, ಇದೀಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ರಸ್ತೆಯಲ್ಲಿ ಅತಿವೇಗದ ಚಾಲನೆ ಮತ್ತು ಕರ್ಕಶ ಶಬ್ದದ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ.

ರಿಕ್ಕಿ ರೈ ಅವರಿಗೆ ಸೇರಿದ KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರನ್ನು ಏರ್ಪೋರ್ಟ್ ರಸ್ತೆಯಲ್ಲಿ ಅತಿ ವೇಗದಲ್ಲಿ ಚಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾರಿನ ಸೈಲೆನ್ಸರ್‌ಗೆ ಮಾರ್ಪಾಡು ಮಾಡಿರುವುದು ಕಂಡುಬರುತ್ತಿದ್ದು, ವಾಹನ ಚಲಿಸುವ ವೇಳೆ ಸೈಲೆನ್ಸರ್‌ನಿಂದ ಬೆಂಕಿಯ ಕಿಡಿಗಳು ಹೊರಬರುತ್ತಿರುವ ದೃಶ್ಯಗಳು ಸೆರೆಯಾಗಿವೆ. ಜೊತೆಗೆ ಕರ್ಕಶ ಶಬ್ದವೂ ಕೇಳಿಬರುತ್ತಿದ್ದು, ಈ ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋ ಆಧರಿಸಿ ಸಂಚಾರಿ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ಜಂಟಿಯಾಗಿ ಪರಿಶೀಲನೆ ಆರಂಭಿಸಿದ್ದಾರೆ. ಘಟನೆ ಯಾವಾಗ ನಡೆದಿದೆ, ಆ ವೇಳೆ ಕಾರಿನಲ್ಲಿ ಯಾರು ಪ್ರಯಾಣಿಸುತ್ತಿದ್ದರು ಹಾಗೂ ಕಾರನ್ನು ರಿಕ್ಕಿ ರೈ ಅವರೇ ಚಲಾಯಿಸುತ್ತಿದ್ದರೇ ಅಥವಾ ಚಾಲಕನಿದ್ದನೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರಾಥಮಿಕ ತನಿಖೆಯ ಬಳಿಕ ಅತಿವೇಗದ ಚಾಲನೆ ಹಾಗೂ ವಾಹನದ ಸೈಲೆನ್ಸರ್ ಮಾರ್ಪಾಡು ಸಂಬಂಧಿತ ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದೇ ಲ್ಯಾಂಬೋರ್ಗಿನಿ ಕಾರು ಕಳೆದ ಮಾರ್ಚ್ 21 ರಂದು ಬೆಂಗಳೂರಿನ ಕುಂಬ್ಳೆ ಸರ್ಕಲ್ ಮತ್ತು ಕಬ್ಬನ್ ರಸ್ತೆ ಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿ ಡ್ರಿಫ್ಟಿಂಗ್ ಪ್ರಕರಣದಲ್ಲಿ ಸುದ್ದಿಯಾಗಿತ್ತು. ಘಟನೆ ಬಳಿಕ “ಆ ವೇಳೆ ಕಾರು ಚಲಾಯಿಸಿದ್ದು ನಾನಲ್ಲ” ಎಂದು ರಿಕ್ಕಿ ರೈ ಸ್ಪಷ್ಟನೆ ನೀಡಿದ್ದರು.

ಆದರೆ, ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿರುವುದು ಪತ್ತೆಯಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ರಿಕ್ಕಿ ರೈ ಪರ ವಕೀಲರು, ರಸ್ತೆ ಪರಿಸ್ಥಿತಿ ಸರಿಯಾಗಿರದ ಕಾರಣ ಕಾರು ಸ್ಕಿಡ್ ಆಗಿತ್ತು ಮತ್ತು ಅಪಘಾತ ತಪ್ಪಿಸಲು ಚಾಲನಾ ಕೌಶಲ್ಯ ಪ್ರದರ್ಶಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಈ ವಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಬಳಿಕ ದಂಡ ಪಾವತಿಸಿ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ್ದ ರಿಕ್ಕಿ ರೈ, ಇದೀಗ ಮತ್ತೊಮ್ಮೆ ಅದೇ ಕಾರಿನೊಂದಿಗೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ಗಮನ ಸೆಳೆದಿದ್ದಾರೆ.