ಚಿಕ್ಕಬಳ್ಳಾಪುರ : ಪೋಷಕರ ಕಣ್ಣು ತಪ್ಪಿಸಿ, ವಿರೋಧದ ನಡುವೆಯೂ ಪ್ರೀತಿಸಿದ ಕೈ ಹಿಡಿದ ನವಜೋಡಿಗೆ ಮದುವೆಯಾದ ಮರುದಿನವೇ ಶಾಕ್ ಕಾದಿತ್ತು. “ಮನೆ ತುಂಬಿಸಿಕೊಳ್ಳುತ್ತೇವೆ ಬನ್ನಿ” ಎಂದು ನಂಬಿಸಿ ಕರೆದ ಯುವತಿಯ ಪೋಷಕರು, ಮನೆಗೆ ಬರುತ್ತಿದ್ದಂತೆ ಮಗಳ ಮೇಲೆಯೇ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ತಾಳಿ ಕಿತ್ತೆಸೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಈ ಹೈಡ್ರಾಮಾ ಸದ್ಯ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಚಿಕ್ಕಬಳ್ಳಾಪುರದ ಅರುಣ್ ಕುಮಾರ್ ಹಾಗೂ ನಿಮ್ಮಾಕಲಕುಂಟೆ ಮೂಲದ ಚೈತ್ರಾ ಕಳೆದ 5 ವರ್ಷಗಳಿಂದ ತೀವ್ರವಾಗಿ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿ ಇಬ್ಬರ ಮನೆಯವರಿಗೂ ಇಷ್ಟವಿರಲಿಲ್ಲ. ಪೋಷಕರ ವಿರೋಧ ಜೋರಾಗುತ್ತಿದ್ದಂತೆ, ಬೇರೆ ದಾರಿ ಕಾಣದ ಈ ಜೋಡಿ ಕಳೆದ ಶನಿವಾರ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.

ಹಾಗೂ ಮದುವೆಯಾದ ಮರುದಿನವೇ (ಭಾನುವಾರ) ಯುವತಿ ಚೈತ್ರಾಳ ಪೋಷಕರು ಫೋನ್ ಮಾಡಿ, “ಆಗಿದ್ದೆಲ್ಲಾ ಹೋಯಿತು, ಮನೆಗೆ ಬನ್ನಿ ಶಾಸ್ತ್ರ ಮಾಡಿ ಮನೆ ತುಂಬಿಸಿಕೊಳ್ಳುತ್ತೇವೆ” ಎಂದು ಮಧುರ ಮಾತುಗಳನ್ನಾಡಿದ್ದಾರೆ. ಹೆತ್ತವರ ಮಾತು ನಂಬಿ ಹೋದ ಜೋಡಿಗೆ ಕಾದಿತ್ತು ಘೋರ ಆಘಾತ. ಮನೆಗೆ ಕಾಲಿಡುತ್ತಿದ್ದಂತೆ ಚೈತ್ರಾಳನ್ನು ಎಳೆದಾಡಿ, ಆಕೆಯ ಕುತ್ತಿಗೆಯಲ್ಲಿದ್ದ ತಾಳಿಯನ್ನು ಕಿತ್ತಾಕಿ ಪೋಷಕರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ. ಹೆತ್ತವರ ಈ ವರ್ತನೆಯಿಂದ ನೊಂದ ನವವರ ಅರುಣ್ ಕುಮಾರ್ ತಕ್ಷಣವೇ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಯುವತಿಯ ಕಡೆಯವರು ಠಾಣೆಗೆ ಲಗ್ಗೆ ಇಟ್ಟಿದ್ದಾರೆ.

ಇದರ ಕುರಿತ್ತಾಗಿ ಪೊಲೀಸರ ಮುಂದೆಯೇ ಪೋಷಕರು ಮತ್ತು ನವಜೋಡಿಯ ನಡುವೆ ಭಾರೀ ಹೈಡ್ರಾಮಾ ನಡೆದಿದ್ದು, ಇಬ್ಬರ ನಡುವೆ ಜೋರು ವಾಗ್ವಾದ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. “ನಮ್ಮ ಜೊತೆ ಬಂದುಬಿಡು” ಎಂದು ಪೋಷಕರು ಎಷ್ಟೇ ಒತ್ತಾಯಿಸಿದರೂ, ಚೈತ್ರಾ ಮಾತ್ರ ಪತಿಯ ಕೈ ಬಿಡಲು ಒಪ್ಪಲಿಲ್ಲ. ಪೋಷಕರು ಎಷ್ಟೇ ರಂಪಾಟ ಮಾಡಿದರೂ, ಬೆದರಿಸಿದರೂ ನವಜೋಡಿ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೆತ್ತವರ ಎಲ್ಲಾ ಮನವೊಲಿಕೆ ಮತ್ತು ಬೆದರಿಕೆಗಳನ್ನು ಧಿಕ್ಕರಿಸಿ, ಪೊಲೀಸ್ ಠಾಣೆಯಲ್ಲೇ ಕೈ ಕೈ ಹಿಡಿದು ಮತ್ತೆ ಒಂದಾಗಿದ್ದಾರೆ. ಸದ್ಯ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
















