ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಗೆ ಸೇರಿದ ಅಪರೂಪದ ಶಾಸನವೊಂದು ಪತ್ತೆಯಾಗಿದ್ದು, ಈ ಭಾಗದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತುಹೋಗಿದ್ದ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ಈ ಕಾರ್ಯ ಇತಿಹಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು 8 ಅಡಿ ಉದ್ದ ಮತ್ತು ಎರಡೂವರೆ ಅಡಿ ಅಗಲದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನದಲ್ಲಿ ಆರು ಸಾಲುಗಳ ಬರಹವಿದೆ. ಪ್ರಾಚೀನ ಕನ್ನಡ ಲಿಪಿಯಲ್ಲಿ ಕೆತ್ತಲಾದ ಶಾಸನವು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ್ದು ಅಂದಿನ ಆಡಳಿತ, ಧಾರ್ಮಿಕ ನಂಬಿಕೆ ಮತ್ತು ದಾನಧರ್ಮದ ವ್ಯವಸ್ಥೆಗಳ ಕುರಿತು ಮಹತ್ವದ ಮಾಹಿತಿಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಹಾಗೂ ಶಾಸನದ ಮೇಲ್ಭಾಗದಲ್ಲಿ ತ್ರಿಶೂಲ, ಈಶ್ವರ, ನಂದಿ, ಸೂರ್ಯ ಹಾಗೂ ಚಂದ್ರರ ಆಕೃತಿಗಳನ್ನು ಕೆತ್ತಲಾಗಿದೆ. ವಿಜಯನಗರ ಕಾಲದ ಧಾರ್ಮಿಕ ಸಂಕೇತಗಳಾದ ಇವು ದೇವಾಲಯಗಳಿಗೆ ಸಂಬಂಧಿಸಿದ ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ. ಕೆಳಭಾಗದಲ್ಲಿ ಗೋವಿನ ಚಿತ್ರವನ್ನೂ ಕೆತ್ತಲಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಬಹುತೇಕ ಅಳಿಸಿಹೋಗಿದೆ. ಇತಿಹಾಸ ಉಪನ್ಯಾಸಕ ಜೀರಿಗನೂರಿನ ಕೆ.ಆಂಜಿನೇಯ್ಯ ಅವರ ಪ್ರಕಾರ, ಈ ಶಾಸನವು ಈಗಾಗಲೇ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪ್ರಕಟವಾಗಿದೆ. 1997ರಲ್ಲಿ ಮೈಸೂರಿನ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಪ್ರಕಟಿಸಿದ ಇನ್ಸ್ಕ್ರಿಪ್ಷನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಕೃತಿಯಲ್ಲಿ ಇದರ ಪಠ್ಯ ದಾಖಲಾಗಿದೆ. ಶಾಸನದ ಮಾಹಿತಿಯ ಪ್ರಕಾರ, ಅಂದಿನ ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ದಾನವಾಗಿ ನೀಡಲಾಗಿತ್ತು. ದೇವಾಲಯಕ್ಕೆ ಸಲ್ಲಿಕೆಯಾಗಿದ್ದ ಗ್ರಾಮದ ಹಕ್ಕುಗಳು ಮತ್ತು ಆಸ್ತಿಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಶಾಸನದಲ್ಲಿ ದಾಖಲಿಸಲಾಗಿದೆ.

ದೇವಾಲಯಗಳ ಆರ್ಥಿಕ ಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಶಾಸನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. “ಇದೇ ಗ್ರಾಮದಲ್ಲಿ ಇನ್ನೊಂದು ಶಾಸನ ದೊರೆತಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದ್ದು, ಅದು ಪ್ರಸ್ತುತ ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ. ಆ ಶಾಸನವನ್ನು ಪತ್ತೆ ಹಚ್ಚಿ ಸಂರಕ್ಷಿಸುವ ಅಗತ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟರು. ಗಂಗಾವತಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಮಾತನಾಡಿ, “ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿರುವುದನ್ನು ದಾಖಲಿಸುವ ಉದ್ದೇಶದಿಂದ ಈ ಶಾಸನವನ್ನು ಸ್ಥಾಪಿಸಲಾಗಿತ್ತು. ಇದು ಒಂದು ರೀತಿಯ ನಾಮಫಲಕ ಅಥವಾ ಗಡಿ ಗುರುತು ಶಾಸನವಾಗಿದ್ದು, ದೇವಾಲಯದ ಆಸ್ತಿ ರಕ್ಷಣೆಗೆ ಸಂಬಂಧಿಸಿದ ಮಹತ್ವದ ದಾಖಲೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.















