ಬೆಂಗಳೂರು: ಮಹಾದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿಯೊಬ್ಬ ತನ್ನ ಪತ್ನಿಯನ್ನು ಮಕ್ಕಳ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಆಘಾತಕಾರಿ ಘಟನೆ ನಡೆದಿದೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಂಜುಳಾ (32) ಹತ್ಯೆಯಾದ ದುರ್ದೈವಿ. ಪತ್ನಿಯನ್ನು ಹತ್ಯೆಗೈದ ಆರೋಪಿ ಪ್ರದೀಪ್ನನ್ನು ಮಹಾದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 15 ವರ್ಷಗಳ ಹಿಂದೆ ಪ್ರದೀಪ್ ಮತ್ತು ಮಂಜುಳಾ ಮದುವೆಯಾಗಿತ್ತು. ಆದರೆ ಪ್ರದೀಪ್ ಇತ್ತೀಚೆಗೆ ಆನ್ಲೈನ್ ಆ್ಯಪ್ಗಳಲ್ಲಿ ಬೆಟ್ಟಿಂಗ್ ಗೀಳಿಗೆ ಸಿಲುಕಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಸಾಲದ್ದಕ್ಕೆ ಪತ್ನಿ ಮೇಲೆಯೂ ಪ್ರದೀಪ್ ಸದಾ ಅನುಮಾನಪಡುತ್ತಿದ್ದ ಎನ್ನಲಾಗಿದೆ. ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ಮಂಜುಳಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಪುಷ್ಪಾಂಜಲಿ ಥಿಯೇಟರ್ ಬಳಿಯ ಮನೆಯಲ್ಲಿ ವಾಸವಿದ್ದರು ಎಂಬುದ್ದಾಗಿದೆ.

ಹಾಗೂ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮಂಜುಳಾ ಇದ್ದ ಮನೆಗೆ ಬಂದಿದ್ದ ಪ್ರದೀಪ್, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವವನಂತೆ ನಟಿಸಿದ್ದಾನೆ. ಕೊನೆಯದಾಗಿ ಕಾಲು ಹಿಡಿಯುತ್ತೇನೆ, ತಪ್ಪಾಯಿತು ಮನೆಗೆ ಬಾ ಎಂದು ಕಾಲಿಗೆ ಬಿದ್ದವನೇ, ಜರ್ಕಿನ್ ಒಳಗಡೆ ಬಚ್ಚಿಟ್ಟುಕೊಂಡು ತಂದಿದ್ದ ಚಾಕುವಿನಿಂದ ಮಂಜುಳಾ ಅವರ ಮೇಲೆ ಮುಗಿಬಿದ್ದಿದ್ದಾನೆ. ಇಬ್ಬರು ಮಕ್ಕಳ ಎದುರೇ ಮಂಜುಳಾ ಅವರಿಗೆ 10ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೂ ಮುನ್ನ ಆರೋಪಿ ಪ್ರದೀಪ್ ವಿಡಿಯೋ ಒಂದನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. “ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ, ಮಕ್ಕಳು ಬೀದಿಗೆ ಬಂದರು.

ಹಾಗೂ ಅತ್ತೆ ಹಾಗೂ ನಾದಿನಿಯಿಂದ ನನ್ನ ಪತ್ನಿ ಹಾಳಾದಳು. ನಾನೂ ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪ್ರದೀಪ್ ತಾನು ಕೂಡ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಹಾದೇವಪುರ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪ್ರದೀಪ್ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಬುದ್ದಾಗಿದೆ.















