ರಾಯಚೂರು: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನೇತಾಜಿ ಪೊಲೀಸರು ಬಂಧಿಸಿದ್ದು, 11.29 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ನಗರದ ಅಂಬೇಡ್ಕರ್ ಹಾಸ್ಟೆಲ್ ಮುಂಭಾಗ ನಿಲ್ಲಿಸಲಾಗಿದ್ದ ಬೈಕ್ ಕಳುವಾಗಿದ್ದ ಹಿನ್ನೆಲೆಯಲ್ಲಿ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇ 21ರಿಂದ ಮೇ 25, 2026ರ ಅವಧಿಯಲ್ಲಿ ನಡೆದ ಈ ಕಳ್ಳತನ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದರು ಎನ್ನಲಾಗಿದೆ.

ಇದರ ಕುರಿತ್ತಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಷು ಗಿರಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಉಮೇಶ್ ಕಾಂಬಳೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಖಚಿತ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ವಾಹನಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಆರೋಪಿಗಳನ್ನು ಆಂಜಿನಯ್ಯ ಅಲಿಯಾಸ್ ಅಂಜಿ, ಕಾರ್ತಿಕ್ ಅಲಿಯಾಸ್ ಆಲೋಡ್ ಕಾರ್ತಿಕ್ ಹಾಗೂ ಆಕಾಶ್ ಅಲಿಯಾಸ್ ಕಮಲಾಪುರ ಆಕಾಶ್ ಎಂದು ಗುರುತಿಸಲಾಗಿದೆ.

ಹಾಗೂ ಕಾರ್ಯಾಚರಣೆಯಲ್ಲಿ ಪಿಎಸ್ಐ ಬಸವರಾಜ್, ಶಾರದಾ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಕಳುವಾಗಿದ್ದ ವಾಹನಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಷು ಗಿರಿ ಶ್ಲಾಘಿಸಿದ್ದಾರೆ ಎಂಬುದ್ದಾಗಿದೆ.
















