ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ಮತ್ತು ನಗರಾಭಿವೃದ್ಧಿಗೆ ಕೊನೆಗೂ ಹೊಸ ನಾಯಕರೊಬ್ಬರು ಅಧಿಕೃತವಾಗಿ ಸಾರಥ್ಯ ವಹಿಸಿಕೊಂಡಿದ್ದಾರೆ. ತೀವ್ರ ರಾಜಕೀಯ ಕುತೂಹಲ, ಆಂತರಿಕ ಅಸಮಾಧಾನ ಹಾಗೂ ಖಾತೆ ಹಂಚಿಕೆಯ ಬಿಕ್ಕಟ್ಟಿನ ಕಾರಣದಿಂದಾಗಿ ಸುಮಾರು 13 ದಿನಗಳ ಕಾಲ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ದೂರವೇ ಉಳಿದಿದ್ದ ಸಚಿವ ಕೃಷ್ಣಬೈರೆಗೌಡ ಅವರು ಕೊನೆಗೂ ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ರಾಜೀ ಸಂಧಾನ ಯಶಸ್ವಿಯಾದ ಬೆನ್ನಲ್ಲೇ, ಸಚಿವರು ತಮ್ಮ ಖಾಸಗಿ ಕಾರಿನಲ್ಲೇ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕೇಂದ್ರ ಕಚೇರಿಗೆ ಆಗಮಿಸಿ ಜಿಬಿಎ ವ್ಯಾಪ್ತಿಯ ಉನ್ನತ ಅಧಿಕಾರಿಗಳ ಮೊದಲ ಮಹತ್ವದ ಸಭೆ ನಡೆಸುವ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಖಾತೆ ಹಂಚಿಕೆಯಾದ ಎರಡು ವಾರಗಳ ನಂತರವೂ ಕೃಷ್ಣಬೈರೆಗೌಡ ಅವರು ಜಿಬಿಎ ಕಚೇರಿಗೆ ಎಂಟ್ರಿ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರಿಗೆ ಪೂರ್ಣ ಪ್ರಮಾಣದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಿರಲಿಲ್ಲ ಎಂಬ ಅಸಮಾಧಾನವಾಗಿತ್ತು. ಬೆಂಗಳೂರು ಅಭಿವೃದ್ಧಿಯ ಅತ್ಯಂತ ಪ್ರಮುಖ ಅಂಗಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು (ಬಿಎಂಆರ್ಡಿಎ) ಹೊರತುಪಡಿಸಿ ಕೇವಲ ಜಿಬಿಎ ವ್ಯಾಪ್ತಿಯನ್ನು ಮಾತ್ರ ನೀಡಿದ್ದಕ್ಕೆ ಅವರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಎರಡು ಇಲಾಖೆಗಳನ್ನು ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದ ಸಚಿವರು, ಸಂಪೂರ್ಣ ಅಧಿಕಾರ ಸಿಗುವವರೆಗೂ ಕಚೇರಿಗೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಹೈಕಮಾಂಡ್ ಭೇಟಿಗಾಗಿ ದೆಹಲಿಗೂ ಹೋಗಿದ್ದರು. ಮತ್ತೊಂದೆಡೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದರಿಂದ ಈ ಬಿಕ್ಕಟ್ಟು ಮತ್ತಷ್ಟು ಜಟಿಲವಾಗಿತ್ತು. ಆದರೆ ನಿನ್ನೆ ಖಾಸಗಿ ಹೋಟೆಲ್ನಲ್ಲಿ ಸುರ್ಜೇವಾಲಾ ಅವರು ಕೃಷ್ಣಬೈರೆಗೌಡರನ್ನು ಕರೆಸಿ ನಡೆಸಿದ ಸುದೀರ್ಘ ಸಂಧಾನ ಮಾತುಕತೆ ಕೊನೆಗೂ ಸಫಲವಾಗಿದ್ದು, ಸಚಿವರು ಮುನಿಸು ಬಿಟ್ಟು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಜಿಬಿಎ ಕೇಂದ್ರ ಕಚೇರಿಗೆ ಆಗಮಿಸಿದ ನೂತನ ಸಚಿವ ಕೃಷ್ಣಬೈರೆಗೌಡ ಅವರನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೂಗುಚ್ಚ ನೀಡಿ ಅತ್ಯಂತ ಆದರದಿಂದ ಬರಮಾಡಿಕೊಂಡರು. ಅಧಿಕಾರ ವಹಿಸಿಕೊಂಡ ತಕ್ಷಣವೇ ಸಚಿವರು ಜಿಬಿಎ ವ್ಯಾಪ್ತಿಯ ಎಲ್ಲಾ ಹಿರಿಯ ಅಧಿಕಾರಿಗಳ ಪರಿಚಯ ಮಾಡಿಕೊಂಡರು. ಈ ಮೊದಲ ಉನ್ನತ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಜಿಬಿಎ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆಗಳ ಆಯುಕ್ತರುಗಳು ಹಾಗೂ ಈ ಐದೂ ಪಾಲಿಕೆಗಳ ಮುಖ್ಯ ಇಂಜಿನಿಯರ್ಗಳು ಭಾಗವಹಿಸಿದ್ದರು. ಮೊದಲ ಸಭೆಯಲ್ಲೇ ಆಡಳಿತಾತ್ಮಕವಾಗಿ ಅತ್ಯಂತ ಆಕ್ಟಿವ್ ಆಗಿ ಕಾಣಿಸಿಕೊಂಡ ಸಚಿವರಿಗೆ ಜಿಬಿಎ ಮುಖ್ಯ ಆಯುಕ್ತರು ಬೆಂಗಳೂರಿನ ಐದು ನಗರ ಪಾಲಿಕೆಗಳ ಸದ್ಯದ ಚಿತ್ರಣ ಮತ್ತು ಆಡಳಿತದ ಸ್ವರೂಪದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಗರದಲ್ಲಿ ಇದುವರೆಗೆ ಆಗಿರುವ ಕಾಮಗಾರಿಗಳು ಹಾಗೂ ಸದ್ಯ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಸಚಿವರು ಪಡೆದುಕೊಂಡರು. ಪ್ರಮುಖವಾಗಿ ನಗರದಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗಳು, ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವರು ಸುದೀರ್ಘ ಚರ್ಚೆ ನಡೆಸಿದರು. ಇದರೊಂದಿಗೆ ನಗರದ ಕಂದಾಯ ವಸೂಲಾತಿ ಪ್ರಗತಿ, ಬಾಕಿ ಇರುವ ತೆರಿಗೆಯ ವಸೂಲಿಗೆ ಕೈಗೊಂಡಿರುವ ಕ್ರಮಗಳು ಮತ್ತು ಸಾರ್ವಜನಿಕರಿಗೆ ಅತ್ಯಂತ ಪ್ರಮುಖವಾಗಿರುವ ಇ-ಖಾತಾ ವಿತರಣೆ ಎಷ್ಟು ಪ್ರಮಾಣದಲ್ಲಿ ಆಗಿದೆ ಹಾಗೂ ಇ-ಖಾತಾಕ್ಕಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ಸಂಖ್ಯೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಸಂಗ್ರಹಿಸಿದರು. ಇದೇ ಸಭೆಯಲ್ಲಿ ಬೆಂಗಳೂರಿನ ಸದ್ಯದ ಪ್ರಮುಖ ಸಮಸ್ಯೆಯಾದ ಮಳೆ ಮತ್ತು ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರು ಗಂಭೀರವಾಗಿ ಚರ್ಚಿಸಿದರು. ನಗರದ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಗಳ ವಿಳಂಬದ ಬಗ್ಗೆ ಇಂಜಿನಿಯರ್ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ನಗರದಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಮೋರಿ ನೀರೆಲ್ಲ ರಸ್ತೆಗೆ ಹರಿಯುತ್ತದೆ, ಈ ಬಗ್ಗೆ ಇದುವರೆಗೆ ನೀವು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಮಳೆ ಬಂದಾಗ ರಾಜಕಾಲುವೆ ನೀರು ರಸ್ತೆಗೆ ಬಂದು ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ನೇರವಾಗಿ ಸಂಬಂಧಪಟ್ಟ ಇಂಜಿನಿಯರ್ಗಳೇ ಹೊಣೆಗಾರರಾಗಬೇಕಾಗುತ್ತದೆ ಮತ್ತು ಅಂತಹ ಇಂಜಿನಿಯರ್ಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಟು ಎಚ್ಚರಿಕೆ ನೀಡಿದರು.

ಹಾಗೂ ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ಪವರ್ ಸೆಂಟರ್ ಆಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಸಾರಥ್ಯ ವಹಿಸಿಕೊಳ್ಳಲು ಸಚಿವರಲ್ಲಿ ಯಾವಾಗಲೂ ಭಾರಿ ಪೈಪೋಟಿ ಇರುತ್ತದೆ. ಆದರೆ ಕಳೆದ ಹಲವು ಸರ್ಕಾರಗಳಲ್ಲಿ ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳ ಸಚಿವರೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದ ಇತಿಹಾಸವಿತ್ತು. ಹಿಂದೆ ಸರ್ವಜ್ಞ ನಗರದ ಶಾಸಕರಾಗಿದ್ದ ಕೆ.ಜೆ. ಜಾರ್ಜ್ ಅವರ ನಂತರ ಸುಮಾರು ಒಂಬತ್ತು ವರ್ಷಗಳ ಕಾಲ ಬೆಂಗಳೂರಿನ ಸ್ಥಳೀಯ ಶಾಸಕರಿಗೆ ಈ ಇಲಾಖೆಯ ಉಸ್ತುವಾರಿ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು, ಆ ಬಳಿಕ ತುಮಕೂರು ಜಿಲ್ಲೆಯವರಾದ ಜಿ. ಪರಮೇಶ್ವರ್ ಅವರು ಬೆಂಗಳೂರು ಉಸ್ತುವಾರಿಯಾಗಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಶಿವಮೊಗ್ಗ ಜಿಲ್ಲೆಯವರಾದ ಬಿ.ಎಸ್. ಯಡಿಯೂರಪ್ಪ ಅವರೇ ಈ ಖಾತೆಯನ್ನು ನಿರ್ವಹಿಸಿದ್ದರು ಮತ್ತು ಕಳೆದ ಮೂರು ವರ್ಷಗಳಿಂದ ರಾಮನಗರ ಜಿಲ್ಲೆಯವರಾದ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಇದೀಗ ಹೊರ ಜಿಲ್ಲೆಯವರೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದ ಸುದೀರ್ಘ ಸಂಪ್ರದಾಯಕ್ಕೆ ಕೃಷ್ಣಬೈರೆಗೌಡ ಅವರು ಬ್ರೇಕ್ ಹಾಕಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಮತ್ತು ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸೇರಿ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷ್ಣಬೈರೆಗೌಡ ಅವರಿಗೆ ಬೆಂಗಳೂರಿನ ನಾಡಿಮಿಡಿತ, ಭೌಗೋಳಿಕ ಪರಿಸ್ಥಿತಿ ಮತ್ತು ಇಲ್ಲಿನ ನೈಜ ನಾಗರಿಕ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನವಿದೆ. ಹೀಗಾಗಿ ಬೆಂಗಳೂರಿನ ಇಂಚಿಂಚು ಮಾಹಿತಿ ಇರುವ ಸ್ಥಳೀಯ ನಾಯಕರೊಬ್ಬರಿಗೆ ಸಿಟಿಯ ಉಸ್ತುವಾರಿ ಸಿಕ್ಕಿರುವುದು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಲಿಗೆ ಎಂಬ ಆಶಯ ಸಾರ್ವಜನಿಕ ವಲಯದಲ್ಲಿದೆ ಎನ್ನಲಾಗುತ್ತಿದೆ.
















