ಮನೆ ಪ್ರವಾಸ ಚಾರಣಪ್ರಿಯರಿಗೆ ಬಲು ಇಷ್ಟ ರಾಮದೇವರ ಬೆಟ್ಟ

ಚಾರಣಪ್ರಿಯರಿಗೆ ಬಲು ಇಷ್ಟ ರಾಮದೇವರ ಬೆಟ್ಟ

0

ರಾಮದೇವರ ಬೆಟ್ಟದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ದೇವರ ದರ್ಶನದೊಂದಿಗೆ ನಿಸರ್ಗದ ರಮಣೀಯ ದೃಶ್ಯವನ್ನು ಸವಿಯುವ ಅವಕಾಶವೂ ಪ್ರವಾಸಿಗರಿಗೆ ಸಿಗುತ್ತದೆ.

ಶೋಲೆ ಬೆಟ್ಟ ಎಂದೇ ಕರೆಯಲ್ಪಡುವ ಬೆಟ್ಟ ಇದು. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ಜಾಗವಿದು. ರಣಹದ್ದು ಸಂರಕ್ಷಣಾ ಧಾಮವಾಗಿಯೂ ಈ ಬೆಟ್ಟ ಗುರುತಿಸಿಕೊಂಡಿದೆ.

ನೆಮ್ಮದಿ ತರುವ ನಿಸರ್ಗದ ಮಡಿಲು

ಪ್ರವಾಸವನ್ನು ಇಷ್ಟಪಡದೇ ಇರುವವರು ಯಾರಾದರೂ ಇದ್ದಾರೆಯೇ…? ಸುಂದರ ತಾಣಗಳಿಗೆ ಭೇಟಿ ನೀಡುವ ಖುಷಿಯೇ ಅನನ್ಯ. ಅದರಲ್ಲೂ ಬ್ಯುಸಿ ಲೈಫ್‌ನ ನಡುವೆ ಒಂದಷ್ಟು ಹೊತ್ತು ಪ್ರಕೃತಿಯ ಮಡಿಲಿನಲ್ಲಿ ಕಳೆಯಲು ಎಲ್ಲರೂ ಬಲು ಇಷ್ಟಪಡುತ್ತಾರೆ. ನಿಸರ್ಗದ ಮಡಿಲು ಸದಾ ಮನಸ್ಸಿಗೆ ನೆಮ್ಮದಿ ತರುತ್ತದೆ. ಆಹ್ಲಾದಕರ ವಾತಾವರಣ ದೇಹಕ್ಕೊಂದು ಚೈತನ್ಯ ತುಂಬುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಮಂದಿ ನಿಸರ್ಗದ ರಮಣೀಯ ತಾಣಗಳತ್ತ ಮುಖ ಮಾಡುತ್ತಿರುತ್ತಾರೆ. ಹೀಗೆ ಪ್ರವಾಸ ಪ್ರಿಯರನ್ನು ಸೆಳೆಯುವಂತಹ ತಾಣಗಳಲ್ಲಿ ಇದು ಒಂದು. ರಾಮನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ಪ್ರವಾಸಿಗರ ಮನಸ್ಸಿಗೆ ಉಲ್ಲಾಸ ನೀಡುವ ದೇವ ಸನ್ನಿಧಿ. ಹೀಗಾಗಿ, ಸಾಕಷ್ಟು ಮಂದಿ ರಾಮನಗರ ಬೆಟ್ಟಕ್ಕೆ ಬಂದು ಒಂದಷ್ಟು ಹೊತ್ತು ಕಳೆದು ಆನಂದಿಸುತ್ತಾರೆ.

ರೇಷ್ಮೆ ನಗರಿಯ ಪ್ರವಾಸಿ ತಾಣ

ರಾಮನಗರ ರೇಷ್ಮೆ ನಗರಿ ಎಂದೇ ಖ್ಯಾತಿ. ಈ ರಾಮನಗರದಲ್ಲಿದೆ ಅದೆಷ್ಟೋ ಸಾಕಷ್ಟು ಪ್ರವಾಸಿತಾಣಗಳು. ಅವುಗಳಲ್ಲಿ ಒಂದು ಶ್ರೀರಾಮದೇವರ ಬೆಟ್ಟ. ಬೆಂಗಳೂರಿನಿಂದ ಸುಮಾರು 55 ಕಿಲೋ ಮೀಟರ್ ಮತ್ತು ರಾಮನಗರ ಪಟ್ಟಣದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿದೆ ರಾಮದೇವರ ಬೆಟ್ಟ. ರಾಮಗಿರಿ, ರಾಮದುರ್ಗ ಎಂಬ ಹೆಸರು ಕೂಡಾ ಈ ಬೆಟ್ಟಕ್ಕಿದೆ. ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ ಇದು. ಚಾರಣ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಬಲು ಇಷ್ಟವಾಗುವಂತಹ ಜಾಗ ಇದು. ಸುಮಾರು ಮುನ್ನೂರಕ್ಕೂ ಅಧಿಕ ಮೆಟ್ಟಿಲನ್ನೇರುವ ಮೂಲಕ ಸಾಗುವ ಖುಷಿಯೇ ಬೇರೆ. ಬೀಸುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ ಇಂಚರ ಮನಸ್ಸಿಗೆ ಖುಷಿ ಕೊಡುತ್ತದೆ. ದಾರಿ ನಡುವೆ ಅಲ್ಲಲ್ಲಿ ಕೆಲ ದೇವ ಸನ್ನಿಧಿಗಳೂ ಕಾಣಸಿಗುತ್ತವೆ…

ಪಟ್ಟಾಭಿರಾಮ ನೆಲೆಯಾಗಿರುವ ಜಾಗವಿದು

ಹೀಗೆ ಬೆಟ್ಟವನ್ನೇರುತ್ತಾ, ನಡುನಡುವೆ ಕಾಣ ಸಿಗುವ ದೇವರಿಗೆ ನಮಿಸುತ್ತಾ ಹೆಜ್ಜೆ ಇಟ್ಟಾಗ ನಮಗೆ ಎದುರಾಗುತ್ತದೆ ಪಟ್ಟಾಭಿರಾಮ ದೇವರು ನೆಲೆಯಾಗಿರುವ ಸನ್ನಿಧಿ. ಸುಗ್ರೀವನಿಂದ ಪ್ರತಿಷ್ಠಾಪಿಸಲ್ಪಟ್ಟ ವಿಗ್ರಹವಿದು ಎಂಬ ಐತಿಹ್ಯ ಇಲ್ಲಿನದು. ವನವಾಸದ ಸಂದರ್ಭದಲ್ಲಿ ಸೀತಾ ಲಕ್ಷ್ಮಣ ಸಹಿತ ಶ್ರೀರಾಮ ಒಂದಷ್ಟು ಕಾಲ ಇಲ್ಲೇ ವಾಸವಿದ್ದ ನಂಬಿಕೆ ಕೂಡಾ ಇಲ್ಲಿದೆ. ಶ್ರೀರಾಮ ಕುಳಿತಿರುವ ಭಂಗಿಯಲ್ಲಿದ್ದರೆ, ರಾಮದೇವರ ತೊಡೆಯ ಮೇಲೆ ಕುಳಿತ ಸೀತಾದೇವಿ, ಬಲಭಾಗದಲ್ಲಿ ನಿಂತ ಲಕ್ಷ್ಮಣ ಮತ್ತು ಶ್ರೀರಾಮನ ಪಾದದ ಬಳಿ ಆಂಜನೇಯ ಕುಳಿತಿರುವಂತೆ ಇರುವ ಅಪೂರ್ವ ವಿಗ್ರಹವಿದು. ಇದೇ ದೇಗುಲದ ಸನಿಹದಲ್ಲಿ ಎಂದೂ ಬತ್ತದ ಒಂದು ಕೊಳವೂ ಇದೆ. ಸೀತೆಯ ಬಾಯಾರಿಕೆಯನ್ನು ತಣಿಸಲು ಶ್ರೀರಾಮದೇವರು ಬಾಣ ಪ್ರಯೋಗಿಸಿ ಪಾತಾಳಗಂಗೆಯನ್ನು ಹೊರ ತಂದಿದ್ದಾಗಿ ಈ ಕೊಳದ ಬಗೆಗಿನ ನಂಬಿಕೆ. ಇದಲ್ಲದೆ, ಇಲ್ಲಿ ರಾಮೇಶ್ವರ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ಸನ್ನಿಧಾನ ಕೂಡಾ ಇದೆ. ಶ್ರೀಪಟ್ಟಾಭಿರಾಮ ದೇಗುಲದ ಎದುರೇ ಏಳು ಬೃಹತ್ ಬಂಡೆಗಳೂ ಕಾಣಿಸುತ್ತವೆ. ಇದು ಸಪ್ತರ್ಷಿಗಳ ಸಂಕೇತ ಎಂದು ನಂಬಲಾಗಿದೆ.

ಬೆಟ್ಟದ ತುದಿಯ ಅದ್ಭುತ ದೃಶ್ಯ

ಶ್ರೀಪಟ್ಟಾಭಿರಾಮ ದೇಗುಲದ ಬಲಭಾಗದಲ್ಲಿ ಎರಡು ದಾರಿಗಳು ಕಾಣಸಿಗುತ್ತವೆ. ಕೆಳಗಿನ ದಾರಿ ಆಂಜನೇಯ ಸ್ವಾಮಿ ಸನ್ನಿಧಾನದತ್ತ ಸಾಗಿದರೆ, ಮೇಲಿನ ದಾರಿ ಬೆಟ್ಟದ ತುದಿಯತ್ತ ನಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ಒಂದು ಕಡೆ ಬಂಡೆಯ ಮೇಲೆ ಕಡಿದಾದ ದಾರಿಯಲ್ಲಿ ಸಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯ. ಆದರೆ, ಈ ದಾರಿಯನ್ನು ಏರಿದರೆ ಕಾಣಸಿಗುವ ವಿಹಂಗಮ ನೋಟ ಮನಸ್ಸಿಗೆ ಆಹ್ಲಾದ ನೀಡುತ್ತದೆ. ದೇಹ ಮತ್ತು ಮನಸ್ಸಿಗೆ ಖುಷಿ ಕೊಡುತ್ತದೆ ಈ ಪ್ರಕೃತಿಯ ರಮ್ಯತೆ. ಈ ಸೊಬಗಿನ ನಡುವೆ ಬೆಟ್ಟವೇರಿದ ದಣಿವೆಲ್ಲಾ ಮಾಯವಾಗುತ್ತದೆ.

ಶೋಲೆ ಬೆಟ್ಟ ಎಂದೇ ಖ್ಯಾತಿ

ರಾಮನಗರದ ಈ ರಾಮದೇವರ ಬೆಟ್ಟ ಶೋಲೆ ಬೆಟ್ಟ ಎಂದೂ ಖ್ಯಾತಿ. ಅದಕ್ಕೆ ಕಾರಣ ಹಿಂದಿಯ ಸೂಪರ್ ಹಿಟ್ ಚಿತ್ರ ಶೋಲೆ. 1975ರಲ್ಲಿ ರಾಮನಗರದ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಶೋಲೆ ಚಿತ್ರದ ಶೂಟಿಂಗ್ ನಡೆದಿತ್ತು. ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ ಅಭಿನಯದ ಈ ಚಿತ್ರ ಬಾಲಿವುಡ್‌ನಲ್ಲಿ ದಾಖಲೆಯನ್ನೇ ಬರೆದಿತ್ತು. ಇಂದಿಗೂ ಉತ್ತರ ಭಾರತೀಯರು ರಾಮದೇವರ ಬೆಟ್ಟವನ್ನು ಶೋಲೆ ಬೆಟ್ಟ ಎಂದೇ ಗುರುತಿಸುವುದು. ಜತೆಗೆ, ಹಲವರು ಇದನ್ನು ರಾಮ್‌ಘಡ್ ಎಂದೂ ಗುರುತಿಸುತ್ತಾರೆ.

ರಣಹದ್ದು ಸಂರಕ್ಷಣಾ ಧಾಮ

ಈ ಪವಿತ್ರ ಬೆಟ್ಟ ರಣಹದ್ದು ಸಂರಕ್ಷಣಾ ಧಾಮ ಕೂಡಾ ಹೌದು. ಅರಣ್ಯ ಇಲಾಖೆ ಈ ಸಂರಕ್ಷಣಾ ಧಾಮದ ನಿರ್ವಹಣೆ ಮಾಡುತ್ತದೆ. ಒಂದಷ್ಟು ವರ್ಷಗಳ ಹಿಂದೆ ಇಲ್ಲಿ ಸಾಕಷ್ಟು ಸಂಖ್ಯೆಯ ರಣಹದ್ದುಗಳು ಇದ್ದವು. ಆದರೆ, ಇದೀಗ ನಾನಾ ಕಾರಣದಿಂದ ಇವುಗಳ ಸಂಖ್ಯೆ ನಶಿಸುತ್ತಾ ಬರುತ್ತಿದೆ. ಉದ್ದ ಕೊಕ್ಕಿನ ರಣಹದ್ದಿಗೆ ಈ ಬೆಟ್ಟ ಖ್ಯಾತಿ. ಇಲ್ಲಿರುವ ಹಕ್ಕಿಗಳ ಸಂರಕ್ಷಣೆಯ ದೃಷ್ಟಿಯಿಂದಲೇ 2012ರಲ್ಲಿ ರಾಜ್ಯ ಸರಕಾರ ರಾಮದೇವರ ಬೆಟ್ಟ ವ್ಯಾಪ್ತಿಯ ಸುಮಾರು 800 ಎಕ್ಟೇರ್‌ ಪ್ರದೇಶವನ್ನು ರಣಹದ್ದು ವನ್ಯಧಾಮವೆಂದು ಘೋಷಣೆ ಮಾಡಿತ್ತು. ಈ ಮೂಲಕ ವಿಶಿಷ್ಟ ಪ್ರಬೇಧದ ರಣಹದ್ದುಗಳ ರಕ್ಷಣೆಯನ್ನು ಇಲ್ಲಿ ಮಾಡಲಾಗುತ್ತದೆ.

ರಾಮದೇವರ ಬೆಟ್ಟಕ್ಕೆ ಹೋಗುವುದು ಹೇಗೆ…?

ಬೆಂಗಳೂರಿನಿಂದ ರಾಮನಗರಕ್ಕೆ ಹೋಗುವುದಾದರೆ ರಾಮನಗರದಲ್ಲಿ ಬಲಕ್ಕೆ ದೊಡ್ಡ ಆಂಜನೇಯನ ವಿಗ್ರಹ ಇರುವ ದ್ವಾರ ಕಾಣಿಸುತ್ತದೆ. ಇದೇ ದ್ವಾರದ ಒಳಗಿನಿಂದ ಸುಮಾರು ಮೂರು ಕಿಲೋ ಮೀಟರ್ ಸಾಗಿದರೆ ಪ್ರಕೃತಿಯ ಈ ರಮ್ಯ ತಾಣ ಕಾಣಸಿಗುತ್ತದೆ. ಬಸ್‌ನಲ್ಲಿ ಬರುವವರು ರಾಮನಗರ ನಿಲ್ದಾಣದಲ್ಲಿ ಇಳಿದು ಆಟೋದ ಮೂಲಕ ಇಲ್ಲಿಗೆ ತಲುಪಬಹುದು. ಪಾರ್ಕಿಂಗ್ ಸೌಲಭ್ಯ ಇದೆ. ಬೆಟ್ಟದ ಒಳಗೆ ಪ್ರವೇಶಿಸಲು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಕ್ಕಳಿಗೆ 10 ರೂಪಾಯಿ, ವಯಸ್ಕರಿಗೆ 25 ರೂಪಾಯಿ ಶುಲ್ಕ ಇದ್ದು, ದ್ವಿಚಕ್ರ ವಾಹನಕ್ಕೆ 10 ರೂಪಾಯಿ ಮತ್ತು ನಾಲ್ಕು ಚಕ್ರದ ವಾಹನಕ್ಕೆ 20 ರೂಪಾಯಿ ಪಾವತಿಸಬೇಕಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಬೆಟ್ಟಕ್ಕೆ ಪ್ರವೇಶಿಸಲು ಅವಕಾಶವಿದೆ.

ಇಂತಹ ತಾಣಗಳಿಗೆ ಹೋಗುವಾಗ ಇಲ್ಲಿನ ಪಾವಿತ್ರ್ಯತೆ, ಸ್ವಚ್ಛತೆಗೆ ಧಕ್ಕೆಯಾಗದಂತೆ ಜವಾಬ್ದಾರಿ ವಹಿಸುವುದು ಬಹಳ ಮುಖ್ಯ. ನೀವು ಎಂದಾದರೂ ರಾಮನಗರ ಬೆಟ್ಟಕ್ಕೆ ಹೋಗುವಾಗ ಯೋಚನೆಯಲ್ಲಿದ್ದರೆ ಕುಡಿಯುವ ನೀರು ಮತ್ತು ಒಂದಷ್ಟು ಆಹಾರಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.