ಮನೆ ಪ್ರವಾಸ ಶಿಲ್ಪಕಲೆಯ ಮಡಿಲುಕೋಪೇಶ್ವರ ದೇಗುಲ

ಶಿಲ್ಪಕಲೆಯ ಮಡಿಲುಕೋಪೇಶ್ವರ ದೇಗುಲ

0

ಕೋಪೇಶ್ವರ ದೇವಸ್ಥಾನವು ಚಾಲುಕ್ಯ ದೊರೆಯಾದ 2ನೇ ಪುಲಿಕೇಶಿ ಕಾಲವಾದ 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಅತ್ಯಂತ ಪ್ರಾಚಿನ ದೇವಾಲಯಗಳ ಪಟ್ಟಿಗೆ ಸೇರುತ್ತದೆ. ಈ ದೇವಾಲಯವು ಕೇವಲ ದೇವರ ತಾಣವಷ್ಟೇ ಅಲ್ಲ, ಐತಿಹಾಸಿಕ ತಾಣವೂ ಹೌದು.  

Join Our Whatsapp Group

ಮಹಾರಾಷ್ಟ್ರದ ಖೀದ್ರಾಪುರ ಗ್ರಾಮದಲ್ಲಿ ಇರುವ ಕೋಪೇಶ್ವರ ದೇಗುಲವು ಶಿಲ್ಪಕಲೆಯನ್ನೇ ತನ್ನ ಮಡಿಲಿನಲ್ಲಿ ಅಡಗಿಸಿಕೊಂಡ ಕಲಾತ್ಮಕ ದೇಗುಲ ಎನ್ನಬಹುದು. ಈ ದೇಗುಲವು ವಿಭಿನ್ನ ಕಲಾಕೃತಿಗಳಿಂದ ಅಲಂಕೃತವಾಗಿದ್ದು, ವೃತ್ತಾಕಾರದಲ್ಲಿರುವ ಇದರ ಚಾವಣಿಯಲ್ಲಿ ಸಾಟಿಯಿಲ್ಲದ ಕಲಾಕೃತಿಗಳನ್ನು ಕೆತ್ತಿರುವುದು ಮತ್ತೂಂದು ವಿಶೇಷತೆ.

ಕರ್ನಾಟಕದ ಹೊಯ್ಸಳ ವಾಸ್ತು ಶೈಲಿಯನ್ನು ಹೋಲುವ ಕೃಷ್ಣೆಯ ನದಿ ದಡದಲ್ಲಿರುವ ಕೋಪೇಶ್ವರ ದೇವಸ್ಥಾನದ ಅರ್ಧ ಭಾಗ ಕರ್ನಾಟಕದ ಜಿಗೊಳ ಗ್ರಾಮ ಮತೊಂದು ಭಾಗ ಮಹಾರಾಷ್ಟ್ರದ ಖೀದ್ರಾರಪುರದಲ್ಲಿ ಹರಡಿಕೊಂಡಿದೆ.

ಈ ದೇಗುಲವನ್ನು ಸ್ವರ್ಗ ಮಂಟಪ, ಸಭಾ ಮಂಟಪ, ಅಂತರಾಳ ಕಕ್ಷ ಮತ್ತು ಗರ್ಭ ಗೃಹ ಎಂದು ನಾಲ್ಕು ಭಾಗವಾಗಿ ವಿಂಗಡಿಸಲಾಗಿದೆ. ದೇಗುಲವನ್ನು ಪ್ರವೇಶಿಸಿದಾಗ ಮೊದಲು ಸಿಗುವುದೇ ಸ್ವರ್ಗ ಮಂಟಪ. ಇದರಲ್ಲಿ ಅದ್ಭುತವಾದ ಕೆತ್ತನೆಗಳುಳ್ಳ ಕಂಬಗಳ ಸಾಲು. ಪ್ರತೀ ಕಂಬದಲ್ಲೂ ವಿಭಿನ್ನವಾದ ಕಲಾಕೃತಿಗಳು. ವೃತ್ತಾಕಾರದ ಕಿಂಡಿಯಲ್ಲಿ ನೀಲಾಕಾಶ ಕಾಣುವ ದೃಶ್ಯ. ಎದುರುಗಡೆ ಗರ್ಭಗುಡಿ.

ಕಂಬ, ಗೋಡೆ, ಶಿಖರಗಳಲ್ಲಿ ಕಲಾಕೃತಿಗಳದ್ದೇ ಕಾರುಬಾರು. ಗರ್ಭಗುಡಿಯಲ್ಲಿ ವಿಷ್ಣು ಹಾಗೂ ಕೋಪೇಶ್ವರರ ಲಿಂಗಗಳಿವೆ. ಸಾಮಾನ್ಯವಾಗಿ ಶಿವನ ಆಲಯಗಳಲ್ಲಿ ನಂದಿಯನ್ನು ಕಾಣಬಹುದು ಆದರೆ ಈ ಮಂದಿರಲ್ಲಿ ನಂದಿ ನೋಡಲು ಸಿಗುವುದಿಲ್ಲ. ಗರ್ಭಗುಡಿಯ ದ್ವಾರದಲ್ಲಿ ಜಯವಿಜಯರ ವಿಗ್ರಹಗಳನ್ನು ಕೆತ್ತಲಾಗಿದೆ. ಸುಮಾರು 90ಕ್ಕೂ ಹೆಚ್ಚಿನ ಆನೆಗಳ ವಿಗ್ರಹಗಳನ್ನು ದೇವಸ್ಥಾನದ ಹೊರವಲಯದಲ್ಲಿ ಕೆತ್ತಲಾಗಿದ್ದು, ಇದುವೇ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.

ಮಳೆಗಾಲದಲ್ಲಿ ಇಲ್ಲಿ ಅಧಿಕ ಮಳೆ ಸುರಿಯುವುದರಿಂದ ಆಕಾಶದಿಂದ ಹಾಲಿನ ಅಭಿಷೇಕವಾದಂತೆ ಭಾಸವಾಗುತ್ತದೆ. ಇದು ಪ್ರವಾಸಿಗರ ತನ್ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಮಂಜಿನ ಕಾರಣವೇನೋ ಈ ಪರಿಸರವೇ ದೇವಲೋಕದಂತೆ ಭಾಸವಾಗುತ್ತದೆ.

ಈ ದೇವಸ್ಥಾನಕ್ಕೆ ಮೊದಲು ಕಾಲಿಟ್ಟಾಗ ನಮ್ಮ ಕಣ್ಣಿಗೆ ಮೊದಲು ಕಾಣುವುದು 48 ಸ್ವರ್ಗ ಮಂಟಪಗಳು. ಇದರಲ್ಲಿ ಆಕಾಶವನ್ನು ನೋಡಬಹುದು. ವೃತ್ತಕಾರ ದಲ್ಲಿ ಆಕಾಶದಿಂದ ಕೆಳಗೆ ಇಳಿಯುವ ಬೆಳಕನ್ನು ಕಣ್ತುಂಬಿಕೊಳ್ಳಬಹುದು. ಪಲ್ಲವರು ಮತ್ತು ಚಾಲುಕ್ಯ ನಡುವೆ ಯುದ್ಧ ನಡೆದ ಹಿನ್ನೆಲೆ ಈ ದೇಗುಲವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಿ ಮುಗಿಸಲು ಸಾಧ್ಯವಾಗಲಿ ಲ್ಲವೆಂದು ಇತಿಹಾಸ ತಿಳಿಸುತ್ತದೆ. ಅದೇ ರೀತಿ ಈ ದೇವಸ್ಥಾನವನ್ನು ಒಂದೇ ದಿನದಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನುವುದೇ ಅಚ್ಚರಿಯ ಸಂಗತಿ.

ಚಾಲುಕ್ಯರು ಈ ದೇವಸ್ಥಾನಕ್ಕೆ ನಮ್ಮ ನಾಡಿನ ವಾಸ್ತುಶಿಲ್ಪವನ್ನು ಕೊಟ್ಟಿದ್ದಾರೆ. ವೈಜ್ಞಾನಿಕ ಮಾಹಿತಿಗಳ ಪ್ರಕಾರ  ಭಾರತದ ಶಿವ ಆಲಯಗಳ ಸಮೃದ್ಧ ಸಂಪತ್ತನ್ನು ತೋರ್ಪಡಿಸುವ ದೇಗುಳಗಳಲ್ಲಿ ಕೋಪೇಶ್ವರ ದೇಗುಲವೂ  ಒಂದಾಗಿದೆ.