ಮನೆ ಭಾವನಾತ್ಮಕ ಲೇಖನ ತೊಂದರೆ ಇರುವುದು ನಿಮ್ಮಲ್ಲಿಯೇ, ಬೇರೆಲ್ಲೂ ಅಲ್ಲ!

ತೊಂದರೆ ಇರುವುದು ನಿಮ್ಮಲ್ಲಿಯೇ, ಬೇರೆಲ್ಲೂ ಅಲ್ಲ!

0

ಕರಿಯರ್‌ನಲ್ಲಿ ಪ್ರಗತಿ ಕಾಣಲು ನಿಮ್ಮಲ್ಲಿರುವ ತೊಂದರೆಗಳನ್ನು ಸರಿಪಡಿಸಿಕೊಳ್ಳಿ ಒಂದು ಕತೆಯಿಂದ ಆರಂಭಿಸೋಣ ಒಂದೂರಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು…

ಒಂದು ಕತೆಯಿಂದ ಆರಂಭಿಸೋಣ. ಒಂದೂರಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಇಬ್ಬರೂ ಮಧ್ಯವಯಸ್ಕರು. ಇತ್ತೀಚೆಗೆ ಗಂಡನಿಗೆ ‘ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂಬ ಸಂಶಯ ಆರಂಭವಾಯಿತು. ಆಕೆಯ ಕಿವಿಗೆ ಚಿಕಿತ್ಸೆ ನೀಡಬೇಕೆಂದುಕೊಂಡನು. ಆದರೆ, ಇದನ್ನು ಹೆಂಡತಿಗೆ ಹೇಳುವುದು ಹೇಗೆ ಎಂಬ ಸಂದಿಗ್ಧತೆಗೆ ಬಿದ್ದನು. ತನ್ನ ಫ್ಯಾಮಿಲಿ ಡಾಕ್ಟರ್‌ಗೆ ಈ ಕುರಿತು ತಿಳಿಸಿದ.

ಆಕೆಗೆ ಕಿವಿ ಕೇಳಿಸುತ್ತದೆಯೇ? ಇಲ್ಲವೇ? ಎಂದು ತಿಳಿಯಲು ಡಾಕ್ಟರ್‌ ಒಂದು ಐಡಿಯಾ ಹೇಳಿದರು. ‘ನಿನ್ನ ಹೆಂಡತಿಗೆ ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯಲು ಮೊದಲು ನೀನು ಅವಳಿಂದ ಹತ್ತು ಅಡಿ ದೂರದಲ್ಲಿ ನಿಂತು ಸಾಮಾನ್ಯ ಧ್ವನಿಯಲ್ಲಿ ಏನಾದರೂ ಮಾತನಾಡು. ಆಕೆ ಪ್ರತಿಕ್ರಿಯೆ ನೀಡದೆ ಇದ್ದರೆ 8 ಅಡಿ ದೂರದಲ್ಲಿ ಮಾತನಾಡಿಸು, ಆಗಲೂ ಪ್ರತಿಕ್ರಿಯೆ ನೀಡದೆ ಇದ್ದರೆ 5 ಅಡಿ ದೂರದಲ್ಲಿ…, ಆಗಲೂ ಪ್ರತಿಕ್ರಿಯೆ ನೀಡದೆ ಇದ್ದರೆ ಇನ್ನೂ ಹತ್ತಿರ ಬಂದು ಮಾತನಾಡಿಸು’ ಎಂದರು.

ಮನೆಗೆ ಬಂದ ಪತಿ ಹೆಂಡತಿಯನ್ನು ಹುಡುಕಿದನು. ಆಕೆ ಅಡುಗೆಮನೆಯಲ್ಲಿದ್ದಳು. ಆಕೆಯಿಂದ ಸುಮಾರು 10 ಅಡಿ ದೂರದಲ್ಲಿ ನಿಂತು ‘ಓಯ್‌, ಇವಳೇ, ರಾತ್ರಿ ಊಟಕ್ಕೆ ಏನು ಸಾಂಬಾರ್‌ ಮಾಡ್ತಾ ಇದ್ದೀಯಾ?’ ಎಂದು ಕೇಳಿದನು. ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಖಂಡಿತವಾಗಿಯೂ, ಇವಳ ಕಿವಿ ಡಮ್‌ ಆಗಿದೆ ಎಂದು ಕೊಂಡು ಆಕೆಯಿಂದ 8 ಅಡಿ ದೂರಕ್ಕೆ ಬಂದು ಮತ್ತೆ ಅದೇ ಪ್ರಶ್ನೆ ಕೇಳಿದನು. ಆಕೆ ಏನು ಹೇಳಲಿಲ್ಲ. ಹೀಗೆ.. 5 ಅಡಿ, 4 ಅಡಿ, 3 ಅಡಿ, 2 ಅಡಿ, 1 ಅಡಿ ದೂರದಿಂದಲೂ ಅದೇ ‘ರಾತ್ರಿ ಊಟಕ್ಕೆ ಏನು ಸಾಂಬರ್‌ ಮಾಡಿದ್ದೀಯಾ?’ ಎಂದು ಕೇಳಿದನು.

ಈಕೆಯ ಕಿವಿ ಹೋಗಿರುವುದು ಖಚಿತ ಎಂದುಕೊಂಡು ಕೊನೆಗೆ ಆಕೆಯ ಕಿವಿಯ ಹತ್ತಿರ ಬಾಯಿ ತಂದು ‘ರಾತ್ರಿ ಊಟಕ್ಕೆ ಏನು?’ ಎಂದು ಕಿರುಚಿದ. ಆಗ, ಅವಳು ಕೋಪದಿಂದ ಇವನ ಕಿವಿಯ ಹತ್ತಿರ ‘ಸೊಪ್ಪು ಸಾಂಬಾರ್‌ ಮತ್ತು ಬೆಂಡೆಕಾಯಿ ಪಲ್ಯ ಅಂತ ಹತ್ತು ಸಾರಿ ಬೊಬ್ಬೆ ಹೊಡಿತಾ ಇದ್ದೀನಿ. ಕಿವಿ ಕೇಳಿಸೊಲ್ವ’ ಎಂದು ಕೋಪದಿಂದ ಹೇಳಿದಳು.

ನಿಜ ಹೇಳಬೇಕೆಂದರೆ, ಆಕೆಯ ಕಿವಿ ಸರಿಯಾಗಿಯೇ ಇತ್ತು. ಸಮಸ್ಯೆ ಇವನಲ್ಲಿತ್ತು. ಕೆಲವೊಮ್ಮೆ ಸಮಸ್ಯೆ ಬೇರೆ ಕಡೆ ಇರುವುದಿಲ್ಲ. ನಮ್ಮಲ್ಲೇ ಇರುತ್ತದೆ. ಹೀಗಾಗಿ, ಇತರರಲ್ಲಿ ತೊಂದರೆ ಹುಡುಕುವ ಬದಲು ನಮ್ಮಲ್ಲಿ ಇರುವ ದೌರ್ಬಲ್ಯತೆ, ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕು.

* ನಿಮ್ಮ ತೊಂದರೆಗೆ ಇತರರನ್ನು ಹೊಣೆ ಮಾಡಬೇಡಿ. ಯಾವುದೇ ತೊಂದರೆ ಉಂಟಾದಾಗ ಆ ತೊಂದರೆಗೆ ನಿಮ್ಮ ಕೊಡುಗೆ ಎಷ್ಟಿದೆ ಎಂದು ಮೊದಲು ಚಿಂತಿಸಿ.

* ಉದ್ಯೋಗದ ಸ್ಥಳದಲ್ಲಿ ಬಹುತೇಕ ಸಮಯ ನಿಮ್ಮ ಪ್ರಗತಿಗೆ ಅಡ್ಡಿಯಾಗಿರುವುದು ಇತರರಲ್ಲ. ಅದು ನೀವೇ ಆಗಿರುತ್ತೀರಿ. ನಿಮ್ಮಲ್ಲಿರುವ ತೊಂದರೆಯೇ ನಿಮ್ಮ ಭಡ್ತಿ, ಇನ್‌ಕ್ರಿಮೆಂಟ್‌, ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಮೊದಲಿಗೆ ನಮ್ಮಲ್ಲಿರುವ ತೊಂದರೆಗಳನ್ನು ಸರಿಪಡಿಸಿಕೊಂಡರೆ ಜಗತ್ತು ಸುಂದರವಾಗಿ ಕಾಣಿಸುತ್ತದೆ.

* ನಿನಗೆ ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಎಂದು ಇತರರನ್ನು ಹಿಯಾಲಿಸಬೇಡಿ. ಮೊದಲು ನೀವು ಅಂತಹ ಕೌಶಲಗಳನ್ನು ಕಲಿಯಿರಿ. ನಿಮ್ಮಿಂದ ಸಾಧ್ಯವಾದರೆ ಇತರರಿಗೂ ಹೇಳಿಕೊಡಿ.

* ಎಲ್ಲರಿಗೂ ಕೆಲಸ ಸಿಕ್ಕಿದೆ, ನನಗಿನ್ನೂ ಕೆಲಸ ಸಿಕ್ಕಿಲ್ಲ, ನನಗೆ ಅದೃಷ್ಟವಿಲ್ಲ ಎಂದು ಕೊರಗಬೇಡಿ. ನಿಮಗೆ ಯಾಕೆ ಕೆಲಸ ಸಿಗಲಿಲ್ಲ ಎಂದು ಆಲೋಚಿಸಲು ಆರಂಭಿಸಿ. ಅದಕ್ಕೆ ಕಾರಣವೇನು? ನಿಮ್ಮಲ್ಲಿ ಇರುವ ಕೊರತೆಯೇನು? ಇತ್ಯಾದಿ ಚಿಂತನೆ ಮಾಡಿದರೆ ನಿಮ್ಮ ವ್ಯಕ್ತಿತ್ವ ಹೆಚ್ಚು ವಿಕಸನವಾಗುತ್ತದೆ.

* ನೀವು ಮಾತುಬಲ್ಲವರಾದರೆ ಸಾಲದು. ಇತರರು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಳ್ಳುವ ಕೌಶಲವೂ ನಿಮ್ಮಲ್ಲಿ ಇರಬೇಕು. ನೀವು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂಬ ದರ್ಪತನ ಬಿಟ್ಟುಬಿಡಿ. ಇತರರ ಮಾತುಗಳಿಗೂ ನೀವು ಕಿವಿಯಾಗಿ.

* ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಲ್ಲಿಯೂ ಯಾವುದಾದರೂ ದೌರ್ಬಲ್ಯ ಇದ್ದೇ ಇರುತ್ತದೆ. ಅಂತಹ ದೌರ್ಬಲ್ಯವನ್ನು ಮೆಟ್ಟಿನಿಂತು ಸಾಧಿಸಲು ಪ್ರಯತ್ನಿಸಿ.