ಮನೆ ಕಾನೂನು ತಲಾಖ್-ಎ-ಹಸನ್‌ ಮೇಲ್ನೋಟಕ್ಕೆ ಅನುಚಿತವಲ್ಲ, ಪ್ರಕರಣವನ್ನು ಬೇರೆ ಕಾರ್ಯಸೂಚಿಗೆ ಬಳಸಿಕೊಳ್ಳಬಾರದು: ಸುಪ್ರೀಂ ಕೋರ್ಟ್‌

ತಲಾಖ್-ಎ-ಹಸನ್‌ ಮೇಲ್ನೋಟಕ್ಕೆ ಅನುಚಿತವಲ್ಲ, ಪ್ರಕರಣವನ್ನು ಬೇರೆ ಕಾರ್ಯಸೂಚಿಗೆ ಬಳಸಿಕೊಳ್ಳಬಾರದು: ಸುಪ್ರೀಂ ಕೋರ್ಟ್‌

0

ಮುಸ್ಲಿಮರ ವಿಚ್ಛೇದನ ಪದ್ದತಿ ತಲಾಖ್-ಎ-ಹಸನ್ ಮೇಲ್ನೋಟಕ್ಕೆ ಅನುಚಿತವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

 [ಬೆನಜೀರ್ ಹೀನಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಯಾವುದೇ ಕಾರ್ಯಸೂಚಿಯನ್ನು ಮುಂದುವರೆಸಲು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ಬಳಸಬಾರದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ತಿಳಿಸಿತು.

“ಮೇಲ್ನೋಟಕ್ಕೆ ಇದು (ತಲಾಖ್-ಎ-ಹಸನ್) ಅಷ್ಟು ಅನುಚಿತವಲ್ಲ. ಮಹಿಳೆಯರಿಗೂ ಒಂದು ಆಯ್ಕೆಯಿದೆ. ಖುಲಾ ಇದೆ. ಪ್ರಾಥಮಿಕವಾಗಿ ನಾನು ಅರ್ಜಿದಾರರನ್ನು ಒಪ್ಪುವುದಿಲ್ಲ. ನೋಡೋಣ. ಬೇರೆ ಯಾವುದೇ ಕಾರಣಕ್ಕಾಗಿ ಇದೊಂದು ಅಜೆಂಡಾ ಆಗಿ ಬಳಕೆಯಾಗಲು ನಾನು ಬಯಸುವುದಿಲ್ಲ” ಎಂದು ನ್ಯಾ. ಕೌಲ್‌ ಹೇಳಿದರು.

ವರದಕ್ಷಿಣೆ ನೀಡಲು ನಿರಾಕರಿಸಿದ್ದರಿಂದ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಪತಿ ಏಪ್ರಿಲ್ 19ರಂದು ವಕೀಲರ ಮೂಲಕ ತಲಾಖ್-ಎ-ಹಸನ್ ನೋಟಿಸ್ ಕಳುಹಿಸಿ ವಿಚ್ಛೇದನ ನೀಡಿದ್ದಾರೆ. ತಲಾಖ್‌ ಪದ್ದತಿ ಮಾನವ ಹಕ್ಕುಗಳು ಮತ್ತು ಸಾಮರಸ್ಯಕ್ಕೆ ವಿರುದ್ಧವಾಗಿದ್ದು ಇಸ್ಲಾಂ ನಂಬಿಕೆಯ ಭಾಗವಾಗಿರದೇ ಇರುವುದರಿಂದ ಅದನ್ನು ನಿಷೇಧಿಸಲು ಇದು ಸಕಾಲ. ಪುರುಷರಿಗೆ ಮಾತ್ರ ತಲಾಖ್‌ ನೀಡಲು ಅವಕಾಶ ಇರುವುದರಿಂದ ಈ ಪದ್ದತಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಅವರು ದೂರಿದ್ದರು.

ತಲಾಖ್-ಎ-ಹಸನ್ ಎಂದರೆ ಮುಸ್ಲಿಂ ಪುರುಷ ತನ್ನ ಹೆಂಡತಿಗೆ ತಿಂಗಳಿಗೊಮ್ಮೆಯಂತೆ ಮೂರು ತಿಂಗಳು “ತಲಾಖ್” ಎಂದು ಹೇಳಿ ವಿಚ್ಛೇದನ ಪಡೆಯುವ ವಿಧಾನ. ತಲಾಖ್‌-ಎ-ಹಸನ್ ಪದ್ದತಿ ಅತಾರ್ಕಿಕ, ಅವಾಸ್ತವಿಕ ಹಾಗೂ ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು ಇದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಲಿಂಗ ಮತ್ತು ಧರ್ಮ ತಟಸ್ಥ ವಿಧಾನದ ಮೂಲಕ ವಿಚ್ಛೇದನ ಪ್ರಕ್ರಿಯೆ ನಡೆಯಬೇಕು. ಪತ್ರಕರ್ತೆ ಬೆನಜೀರ್ ಹೀನಾ ಅವರು ವಕೀಲ ಅಶ್ವನಿ ಕುಮಾರ್ ದುಬೆ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಕೋರಿದ್ದರು.

ಆದರೆ ವಿಚಾರಣೆ ವೇಳೆ ನ್ಯಾಯಾಲಯ ‘ಖುಲಾ’ ಮೂಲಕ ಮಹಿಳೆಯರಿಗೂ ಇದೇ ರೀತಿಯ ಆಯ್ಕೆ ಇದೆ. ಸರಿಪಡಿಸಲಾಗದ ರೀತಿಯಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿದಾಗ ನ್ಯಾಯಾಲಯಗಳು ಪರಸ್ಪರ ಒಪ್ಪಿಗೆಯನ್ನು ಆಧರಿಸಿ ವಿಚ್ಛೇದನ ನೀಡುತ್ತವೆ ಎಂದು ಪೀಠ ಹೇಳಿತು.

“ಇದು ತ್ರಿವಳಿ ತಲಾಖ್ ಅಲ್ಲ. ನಿಮಗೂ (ಮಹಿಳೆಯರಿಗೆ) ಖುಲಾ ಆಯ್ಕೆ ಇದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಒಟ್ಟಿಗೆ ಇರಲು ಸಾಧ್ಯವಾಗದಿದ್ದರೆ, ಮತ್ತೆ ಬದಲಿಸಲಾಗದ ರೀತಿಯ ವಿಚ್ಚೇದನವನ್ನು ಕೂಡ ನೀಡುತ್ತೇವೆ. ನೀವು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡಲು ಸಿದ್ಧರಿದ್ದೀರಾ?” ಎಂದು ಪ್ರಶ್ನಿಸಿತು.

ಮಹರ್‌ಗಿಂತ (ಮದುವೆಯ ಸಮಯದಲ್ಲಿ ಪತಿ ತನ್ನ ಹೆಂಡತಿಗೆ ಗೌರವ ಸೂಚಕವಾಗಿ ನೀಡುವ ಕಡ್ಡಾಯ ಉಡುಗೊರೆ) ಹೆಚ್ಚಿನ ಮೊತ್ತ ಪಾವತಿಸಿದರೆ ಅರ್ಜಿದಾರರು ವಿಚ್ಛೇದನಕ್ಕೆ ಒಪ್ಪುತ್ತಾರೆಯೇ ಎಂದು ಕೂಡ ಪೀಠ ಪ್ರಶ್ನಿಸಿದೆ.

ಈ ಬಗ್ಗೆ ಸೂಚನೆಗಳನ್ನು ಪಡೆಯುವಂತೆ ಅರ್ಜಿದಾರರ ಪರ ವಕೀಲರನ್ನು ಕೋರಿದ ಅವರು, ಪ್ರಕರಣವನ್ನು ಹೆಚ್ಚಿನ ಪರಿಗಣನೆಗೆ ಆಗಸ್ಟ್ 29ಕ್ಕೆ ಮುಂದೂಡಿದರು.

ತನ್ನ ಗಂಡ ತಲಾಖ್-ಎ-ಹಸನ್ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿದ್ದ ಇದೇ ರೀತಿಯ ಅರ್ಜಿಯೊಂದು ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ನ್ಯಾಯಾಲಯ ಈ ಸಂಬಂಧ ಪತಿ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್‌ ನೀಡಿತ್ತು.