ಮನೆ ಭಾವನಾತ್ಮಕ ಲೇಖನ ಆತ್ಮವಿಶ್ವಾಸವೇ ಸಾಧನೆಯ ಮೊದಲ ಹೆಜ್ಜೆ

ಆತ್ಮವಿಶ್ವಾಸವೇ ಸಾಧನೆಯ ಮೊದಲ ಹೆಜ್ಜೆ

0

ಯಾರು ಯಶಸ್ಸಿನ ದಾರಿ ಹಿಡಿದು ಸಾಗುತ್ತಾರೋ ಅವರು ಸದಾ ತಮ್ಮನ್ನು ತಾವು ತಲ್ಲೀನತೆ, ತನ್ಮಯತೆಯಿಂದ ಕರ್ತಾರನ ಕಮ್ಮತದಂತೆ ಕಾಯಕಯೋಗಿಯಾಗಿರುತ್ತಾರೆ. ಸತತ ಪರಿಶ್ರಮ, ಶ್ರದ್ಧೆ, ಉತ್ಸಾಹ, ಆತ್ಮಪ್ರಶಂಸೆ, ಇಚ್ಛಾಶಕ್ತಿ ಇವು ಸಾಧಕನ ಪಂಚಸೂತ್ರಗಳು.

ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿನ ಶ್ರಮ, ಶ್ರದ್ಧೆ ಜತೆಗೆ ದೃಢವಾದ ನಿರ್ಧಾರವಿರಬೇಕು. ಬದುಕನ್ನು ಪ್ರೀತಿಸಿದ ದೇಶದ ಮಹಾನ್‌ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್‌ ಕಲಾಂ ಹೇಳುವಂತೆ ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಸೂರ್ಯನಂತೆ ಉರಿಯಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೂ ಅದು ಮೊದಲು ನಮ್ಮ ನರನಾಡಿಗಳಲ್ಲಿ ತುಂಬಿಕೊಂಡಿರಬೇಕು ಮತ್ತು ಅದೇ ಉಸಿರಾಗಿರಬೇಕು.

ನಮ್ಮೆದುರಿಗೆ ನೂರು ಸವಾಲುಗಳಿದ್ದರೆ ಅವುಗಳಲ್ಲಿ ಒಂದನ್ನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸ, ಛಲ, ಮೊದಲು ನಮ್ಮಲ್ಲಿ ಮೂಡಬೇಕು. ಸಾಧನೆಯ ಹಾದಿ ಮಧ್ಯೆ ಎಷ್ಟೇ ಸವಾಲುಗಳು ಎದುರಾದರೂ ಅವುಗಳನ್ನೆಲ್ಲ ಎದುರಿಸಿ ನಿಲ್ಲುವ ಆತ್ಮಸ್ಥೆರ್ಯ ಅಗತ್ಯ. ಬದುಕು ಒಡ್ಡುವ ವಿರೋಧದ ನಡುವೆಯೂ ಬೆದರದೆ, ಬೆಚ್ಚದೆ, ಬದುಕನ್ನು ಪ್ರೀತಿಸುವ ಅದಮ್ಯ ಆಕಾಂಕ್ಷೆ ನಮ್ಮದಾಗಬೇಕು.

ನಾನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬಾಳಬೇಕು, ಉನ್ನತ ಹುದ್ದೆಯನ್ನು ಪಡೆಯಬೇಕು, ಎಲ್ಲರಂತೆ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದೆಲ್ಲ ಕನಸು ಕಾಣುವುದು ಸಹಜ, ಹಾಗೆಯೇ ಹೀಗೆಲ್ಲ ಆಸೆ ಪಡುವುದು ಯಾವುದೇ ರೀತಿಯಲ್ಲಿ ತಪ್ಪಲ್ಲ. ಆದರೇ ಅದನ್ನು ಸಾಧಿಸಲು ಛಲದ ಜತೆಗೆ ಏಕಾಗ್ರತೆ, ನಿರಂತರ ಪ್ರಯತ್ನ, ಹಾಗೆಯೇ ಕೆಲಸದ ಮೇಲೆ ಗೌರವ, ಪ್ರೀತಿ ಖಂಡಿತ ಇರಬೇಕು.

ತಮ್ಮ ಕನಸುಗಳನ್ನು ಕಾರ್ಯರೂಪಕ್ಕೆ ತರಲು ಮೊದಲು ನಾವು ಏಕಾಗ್ರತೆಯಿಂದ ದೇಹ, ಮನಸ್ಸನ್ನು ಸನ್ನದ್ಧಗೊಳಿಸಬೇಕು. ವಿಶ್ವದ ಪ್ರಸಿದ್ಧ ಸಾಧಕರು, ಮಹಾಪುರುಷರ ಜೀವನಗಾಥೆಗಳು ಬಹುತೇಕ ಈ ವಿಚಾರಗಳನ್ನೇ ಪ್ರತಿಪಾದಿಸುತ್ತವೆ. ಕೇವಲ ಕನಸು ಕಂಡರೆ ಸಾಲದು, ಅದನ್ನು ನನಸುಗೊಳಿಸುವ ನಿಟ್ಟಿನಲ್ಲಿ ಕಠಿನ ಪರಿಶ್ರಮ ಅತ್ಯಗತ್ಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸುತ್ತಲೇ ಬಂದಿದ್ದ ಯಶಸ್ಸು ಯಾರೊಬ್ಬರ ಸ್ವತ್ತೂ ಅಲ್ಲ. ಹುಟ್ಟಿನಿಂದಲೇ ಯಾರೂ ಸಹ ಯಶಸ್ವಿ ವ್ಯಕ್ತಿಗಳಾಗಿರುವುದಿಲ್ಲ.

ಯಶಸ್ಸು ಎಂಬುದು ಒಂದು ರೀತಿಯ ತಪಸ್ಸು, ನಾವು ಯಾವ ವಿಚಾರದ ಕುರಿತು ಸತತವಾಗಿ ಯೋಚಿಸುತ್ತೇವೆಯೊ, ಚಿಂತಿಸುತ್ತೇವೆಯೊ ಅಥವಾ ಅಭ್ಯಾಸಿಸುತ್ತೇವೆಯೋ ಅದಕ್ಕೆ ನಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಧಾರೆಯೆರೆಯುವ ಮನಸ್ಸು ಮಾಡುತ್ತೇವೆಯೋ ಆಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ವಿಜ್ಞಾನಿಯಾಗಿದ್ದ ಆಲ್ಬರ್ಟ್‌ ಐನ್‌ಸ್ಟಿನ್‌ ಕೂಡ ಈ ವಿಚಾರವನ್ನು ದೃಢವಾಗಿ ನಂಬಿದ್ದರಲ್ಲದೆ ಅದರಂತೆ ನಡೆದು ಸಾಧನೆಯ ಶಿಖರ ಏರಿದರು.

ಯಶಸ್ಸು ಅಥವಾ ಸಾಧನೆ ಎನ್ನುವುದು ಕೇವಲ ಒಂದು ನಿರ್ಧಾರ ಅಥವಾ ಒಂದು ಬಾರಿ ಶ್ರಮ ಹಾಕಿದಾಕ್ಷಣ ಲಭಿಸದು. ಹಾಗೊಂದು ವೇಳೆ ನಮ್ಮ ಸಣ್ಣ ಪರಿಶ್ರಮ ಅಥವಾ ಪ್ರಯತ್ನದಿಂದ ಇಂಥದ್ದೊಂದು ಯಶಸ್ಸು ಲಭಿಸಿದರೂ ಅದು ಕ್ಷಣಿಕ. ಯಶಸ್ಸು ಅಥವಾ ಸಾಧನೆ ಶಾಶ್ವತವಾಗಿರಬೇಕು ಎಂದಾದರೆ ನಮ್ಮ ಮನಸ್ಸು ಏಕಾಗ್ರತೆಯಿಂದ ಕೂಡಿದ್ದು ನೋಟ ಗುರಿಯತ್ತಲೇ ನೆಟ್ಟಿರಬೇಕು. ಇದಕ್ಕೆ ಸತತ ಪರಿಶ್ರಮ ಅಥವಾ ಪ್ರಯತ್ನ ಜತೆಗೂಡಿದಾಗ ಯಶಸ್ಸು ನಮ್ಮ ಸ್ವತ್ತಾಗುವುದು ನಿಸ್ಸಂಶಯ. ಪ್ರತಿಯೊಬ್ಬ ಸಾಧಕನಿಗೂ ಅವನ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿರಬೇಕು. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಏಕೆಂದರೆ ಅದು ನಂಬಿರುವುದು ಮರದ ದೊಡ್ಡ ರಂಬೆ ಯನ್ನಲ್ಲ, ತನ್ನದೇಯಾದ ರೆಕ್ಕೆಯನ್ನು. ಅಂತೆಯೇ ಮಾನವನು ಕೂಡ ಛಲದಿಂದ ಸಾಧನೆಯತ್ತ ಮುಖ ಮಾಡಿದ್ದೇ ಆದಲ್ಲಿ ಅವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.