ನವದೆಹಲಿ(Newdelhi): ಸೇನಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ಹುದ್ದೆಗೆ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಚೌಹಾಣ್ ಅವರು ಸೆ.30 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಅನಿಲ್ ಚೌಹಾಣ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಕೇಂದ್ರದ ರಕ್ಷಣಾ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಅನಿಲ್ ಅವರು ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಸೇನೆಯ ಹಲವು ಹುದ್ದೆಗಳನ್ನು ನಿಭಾಯಿಸಿದ್ದು, ಈಶಾನ್ಯ ಭಾರತ ಮತ್ತು ಜಮ್ಮು–ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ಸಂದ ಪ್ರಶಸ್ತಿಗಳು: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರ ಸೇನೆಯಲ್ಲಿನ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.
ಏನಿದು ಸಿಡಿಎಸ್ ಹುದ್ದೆ: ಸಿಡಿಎಸ್ (ಚೀಪ್ ಆಫ್ ಡಿಫೆನ್ಸ್ ಸ್ಟಾಫ್) ಸೇನಾ ವ್ಯವಸ್ಥೆಯಲ್ಲಿಯೇ ಅತ್ಯಧಿಕ ಹುದ್ದೆಯಾಗಿದೆ. ಪದಾತಿದಳ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದರೆ ಅವರೆಲ್ಲರಿಗೂ ಮುಖ್ಯಸ್ಥರಾಗಿರುವುದು ಸಿಡಿಎಸ್ ಹುದ್ದೆಯಾಗಿದೆ.
ಜನರಲ್ ಬಿಪಿನ್ ರಾವತ್ ಅವರ ದುರ್ಮರಣದಿಂದಾಗಿ ಒಂಬತ್ತು ತಿಂಗಳಿನಿಂದ ಸಿಡಿಎಸ್ ಹುದ್ದೆ ಖಾಲಿ ಇತ್ತು.