ನವದಹೆಲಿ: ಚುನಾವಣೆ ಸಂದರ್ಭದಲ್ಲಿ ಹಿಂದೂ ಆಗಿ ಬದಲಾಗುವ, ಬಣ್ಣ ಬದಲಿಸುವ ಕೇಜ್ರಿವಾಲ್ ಅವರು ಅತಿದೊಡ್ಡ ದ್ವೇಷ ಪ್ರಚಾರಕ ಮತ್ತು ಹಿಂದೂ ವಿರೋಧಿ ಎಂಬುದನ್ನು ವಾಸ್ತವಾಂಶಗಳೇ ಹೇಳುತ್ತವೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.
ಇತ್ತೀಚೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ತಾರಾ ಪ್ರಚಾರಕರ ಪಟ್ಟಿಗೆ ಆಮ್ ಆದ್ಮಿ ಪಕ್ಷವು (ಎಎಪಿ) ಸೇರ್ಪಡೆ ಮಾಡಿದೆ.
ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಗೌತಮ್ ಇರಬಹುದು ಅಥವಾ ಗುಜರಾತ್ ಬಿಜೆಪಿ ನಾಯಕ ಗೋಪಾಲ್ ಇಟಾಲಿಯಾ ಆಗಿರಬಹುದು, ಅವರ ಹಿಂದೂ ವಿರೋಧಿ ಹೇಳಿಕೆಗಳೇ ಕೇಜ್ರಿವಾಲ್ ಅವರ ‘ವಿಷಕಾರಿ’ ಮನಸ್ಥಿತಿಯನ್ನು ಪ್ರದರ್ಶಿಸುತ್ತವೆ ಎಂದು ಹೇಳಿದ್ದಾರೆ.
ಮುಂದುವರಿದು, ಎಎಪಿ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಆ ಪಕ್ಷ ಮತ್ತು ಅದರ ನಾಯಕ ಕೇಜ್ರಿವಾಲ್ ಅವರು ಒಂದು ಸಮುದಾಯದ ಮತ ಪಡೆಯುವುದರತ್ತ ಮಾತ್ರ ಗಮನ ಹರಿಸಿದ್ದಾರೆ ಎಂಬುದನ್ನು ಹೇಳುತ್ತವೆ. ದೆಹಲಿ ಸರ್ಕಾರವು ವಕ್ಫ್ ಮಂಡಳಿಗೆ ಅನುದಾನ ನೀಡುತ್ತದೆ. ಇಮಾಮ್‌ಗಳಿಗೆ ವೇತನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು ಧಾರ್ಮಿಕ ಮತಾಂತರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗೌತಮ್, ‘ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ’ ಎಂದು ಹೇಳಿಕೆ ನೀಡಿದ್ದರು.
ಇದು ವಿವಾದವಾಗುತ್ತಿದ್ದಂತೆಯೇ ಅವರು ದೆಹಲಿ ಸರ್ಕಾರದ ಸಚಿವ ಸಂಪುಟವನ್ನು ತೊರೆದಿದ್ದರು. ಇದೀಗ ಅವರ ಹೆಸರನ್ನು ಡಿಸೆಂಬರ್‌ನಲ್ಲಿ ನಡೆಯುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ತನ್ನ ತಾರಾ ಪ್ರಚಾರಕರ ಪಟ್ಟಿಗೆ ಎಎಪಿ ಸೇರಿಸಿದೆ.ಡಿಸೆಂಬರ್ 4 ರಂದು ಪಾಲಿಕೆ ಚುನಾವಣೆ ನಡೆಯಲಿದೆ.