ಮನೆ ಕಾನೂನು ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬ ಧೋರಣೆ: ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬ ಧೋರಣೆ: ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

0

ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಈ ದೇಶದ ನೆಲದ ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ.

ಹತ್ತು ದಿನಗಳ ಹಿಂದೆ ಜಡ್ಜ್ ನೇಮಕಾತಿಗೆ ಕೊಲಿಜಿಯಂ ನೆಪದಲ್ಲಿ ವಿಳಂಬ ಮಾಡುತ್ತಿರುವ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾ. ಸಂಜಯ್ ಕೃಷ್ಣ ಕೌಲ್, ನ್ಯಾ. ಎ.ಎಸ್. ಓಕಾ, ನ್ಯಾ. ವಿಕ್ರಮನಾಥ್ ಅವರನ್ನು ಒಳಗೊಂಡ ಪೀಠ, ಗುರುವಾರ ಮತ್ತೆ ಬಿಸಿ ಮುಟ್ಟಿಸಿದೆ.

ಕೊಲಿಜಿಯಂ ವ್ಯವಸ್ಥೆ ಈ ದೇಶದ ಕಾನೂನಿನ ಅಡಿ ರಚನೆಯಾಗಿದೆ. ಇದಕ್ಕೆ ಸರಕಾರ ಗೌರವ ಕೊಡಬೇಕು. ಯಾರೋ ಒಂದಿಷ್ಟು ಮಂದಿ ಕೊಲಿಜಿಯಂ ಬಗ್ಗೆ ಋುಣಾತ್ಮಕವಾಗಿ ಮಾತನಾಡಿದ ಮಾತ್ರಕ್ಕೆ ಕಾನೂನು ಎಂದಿಗೂ ಬದಲಾಗುವುದಿಲ್ಲ’ ಎಂದು ನ್ಯಾಯಪೀಠ, ಕಾನೂನು ಸಚಿವ ಕಿರಣ್ ರಿಜಿಜು ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದೆ.

ಕೊಲಿಜಿಯಂ ಬಗ್ಗೆ ಕೆಲವು ವ್ಯಕ್ತಿಗಳು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಇಂಥ ಪ್ರವೃತ್ತಿಗಳಿಗೆ ಮೊದಲು ಕಡಿವಾಣ ಹಾಕಲು ಸರಕಾರಕ್ಕೆ ಸಲಹೆ ಸೂಚನೆ ನೀಡಿ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ನ್ಯಾಯಪೀಠ ತಾಕೀತು ಮಾಡಿದೆ.

ಮುಂದುವರಿದು ಸರಕಾರಕ್ಕೆ ಕಿವಿ ಹಿಂಡಿದ ನ್ಯಾಯಪೀಠ, ಕಾನೂನು ರಚನೆ ಮಾಡುವುದು ಸರಕಾರವೇ ಇರಬಹುದು, ಅದರ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶೆ ಮಾಡುವುದು ಕೋರ್ಟ್ ಕರ್ತವ್ಯ. ನ್ಯಾಯಾಲಯದ ಪರಿಶೀಲನೆ ಬಳಿಕ ಕಾನೂನಿನ ಸರಿ ತಪ್ಪು ಅರ್ಥ ಮಾಡಿಕೊಂಡು ಜನ ಅನುಸರಿಸುತ್ತಾರೆ ಎಂದು ವಿಶ್ಲೇಷಣೆ ಮಾಡಿದೆ.

ಕೋರ್ಟ್ ಎತ್ತಿರುವ ಕೆಲವು ವಿಚಾರಗಳ ಬಗ್ಗೆ ಸರಕಾರ ಹಾಗೂ ಕಾನೂನು ಸಚಿವಾಲಯದ ಜತೆ ಚರ್ಚೆ ನಡೆಸಿ, ಸಂಘರ್ಷ ಪರಿಹಾರಕ್ಕೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು’ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ತಿಳಿಸಿದರು.

ಕೊಲಿಜಿಯಂ ಸಭೆ ವಿವರ ನೀಡಲಾಗದು: ಅರ್ಜಿ ವಜಾ

ನ್ಯಾಯಾಧೀಶರ ನೇಮಕಾತಿ ಕುರಿತಾದ ಕೊಲಿಜಿಯಂ ಸಭೆಯಲ್ಲಿನ ವಿವರಗಳನ್ನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಸಮಿತಿಯಲ್ಲಿನ ಚರ್ಚೆಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಕೊಲಿಜಿಯಂ ಸಭೆಯಲ್ಲಿ ಏನು ಚರ್ಚಿಸಲಾಗಿದೆಯೋ ಅದು ಸಾರ್ವಜನಿಕ ವಾಹಿನಿಗೆ ಬರಬಾರದು. ಸಭೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಮತ್ತು ನಿರ್ಣಯ ಅಂಗೀಕರಿಸದೆ ಇದ್ದರೆ, ಅಂತಿಮ ನಿರ್ಧಾರವನ್ನು ಮಾತ್ರವೇ ಅಪ್ಲೋಡ್ ಮಾಡುವುದು ಅಗತ್ಯವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

2018ರ ಡಿಸೆಂಬರ್ 12ರಂದು ಇಬ್ಬರು ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದ್ದ ಕೊಲಿಜಿಯಂ ಸಭೆಯ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದರು. ಆರ್ಟಿಐ ಅಡಿಯಲ್ಲಿನ ಕೋರಿಗೆ ತಿರಸ್ಕೃತವಾಗಿದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಆ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಸಭೆಯಲ್ಲಿ ಹಾಜರಿದ್ದ ಒಬ್ಬ ನ್ಯಾಯಮೂರ್ತಿಯ ಸಂದರ್ಶನದ ಲೇಖನವನ್ನು ಅರ್ಜಿದಾರರು ಅವಲಂಬಿಸಿದ್ದಾರೆ. ಇದರ ಬಗ್ಗೆ ಹೇಳಿಕೆ ನೀಡಲು ಬಯಸುವುದಿಲ್ಲ. ಅರ್ಜಿ ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.