ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ದ ಭಾನುವಾರ ಅಂತ್ಯವಾಗಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಫಲರಾಗಿರುವ ಕಾರಣ ಭಾರತ ತಂಡದ ಹಂಗಾಮಿ ನಾಯಕ ಕೆ.ಎಲ್ ರಾಹುಲ್’ಗೆ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಎಚ್ಚರಿಕೆ ನೀಡಿದ್ದಾರೆ.
ಕೆ.ಎಲ್ ರಾಹುಲ್ ಕಳೆದ ಎಂಟು ಟೆಸ್ಟ್ ಪಂದ್ಯಗಳಿಂದ 17.12 ಸರಾಸರಿಯಲ್ಲಿ ಕೇವಲ 137 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಕೇವಲ ಒಂದೇ ಒಂದು ಅರ್ಧಶತಕ ಸಿಡಿಸಿದ್ದಾರೆ. ಇದರಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳಲ್ಲಿ ಕೇವಲ 57 ರನ್ ಗಳಿಸಿದ್ದರು. ಕೆ.ಎಲ್ ರಾಹುಲ್ ವೈಫಲ್ಯದ ಹೊರತಾಗಿಯೂ ಭಾರತ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಟೆಸ್ಟ್ ಕ್ರಿಕೆಟ್’ನಲ್ಲಿ ಕೆ.ಎಲ್.ರಾಹುಲ್ ಅವರ ಅಂಕಿ ಅಂಶಗಳು ಉತ್ತಮವಾಗಿಲ್ಲ. ಹಾಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ತವರು ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು, ಇಲ್ಲವಾದಲ್ಲಿ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿಯವರೆಗೂ 40 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಕೆಎಲ್ ರಾಹುಲ್ ಕೇವಲ 30ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಬಗ್ಗೆ ಕ್ರಿಕ್ಬಝ್ ಚರ್ಚೆಯಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಕೆ.ಎಲ್ ರಾಹುಲ್ ಸಂಖ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
“ನಾನು ಕೆ.ಎಲ್ ರಾಹುಲ್ ಅವರಿಗೆ ಇನ್ನಷ್ಟು ಟೆಸ್ಟ್ ಪಂದ್ಯಗಳನ್ನು ನೀಡಲು ಬಯಸುತ್ತೇನೆ. ಆದರೆ, ಅವರು ಉತ್ತಮ ಪ್ರದರ್ಶನ ನೀಡದೇ ಹೋದಲ್ಲಿ, ಒಟ್ಟಾರೆ 40 ಟೆಸ್ಟ್ ಪಂದ್ಯಗಳ ಸರಾಸರಿ ಅವರಿಗೆ ವಿರುದ್ದವಾಗಲಿದೆ. ಏಕೆಂದರೆ ಅವರ ಸರಾಸರಿ ಕೇವಲ 30 ರಷ್ಟಿದೆ. ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. 35 ಟೆಸ್ಟ್ ಪಂದ್ಯಗಳಾಡಿರುವ ಭಾರತೀಯ ಆಟಗಾರರ ಪೈಕಿ ಕೆ.ಎಲ್ ರಾಹುಲ್ ಅವರ ಸರಾಸರಿ ತುಂಬಾ ಕಡಿಮೆ ಇದೆ,” ಎಂದು ದಿನೇಶ್ ಕಾರ್ತಿಕ್ ಹೇಳಿದರು.
ಮುಂದಿನ ವರ್ಷದ ಆರಂಭದಲ್ಲಿ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಕೆ.ಎಲ್ ರಾಹುಲ್ ಶತಕ ಬಾರಿಸಿಲ್ಲವಾದರೆ, ತಂಡದಲ್ಲಿ ಶಾಶ್ವತವಾಗಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಆ ಮೂಲಕ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ಗೆ ಶುಭಮನ್ ಗಿಲ್ ಬರಲಿದ್ದಾರೆ.
“ಈ ಹಾದಿಯಲ್ಲಿ ಕೆಎಲ್ ರಾಹುಲ್ ಹೆಚ್ಚಿನ ಅಭ್ಯಾಸ ನಡೆಸಬೇಕಾಗಿದೆ. ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಬೇಕೆಂದರೆ, ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ ಎರಡು ಶತಕಗಳನ್ನು ಸಿಡಿಸಬೇಕು. ಇಲ್ಲವಾದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಆ ಮೂಲಕ ತಂಡದ ಪ್ಲೇಯಿಂಗ್ ಇಲೆವೆನ್’ನಲ್ಲಿ ಶುಭಮನ್ ಗಿಲ್ ಆಡಲಿದ್ದಾರೆ,” ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: ಮೊದಲ ಇನಿಂಗ್ಸ್ 73.5 ಓವರ್’ಗಳಲ್ಲಿ 227 ರನ್ಗಳಿಗೆ ಆಲ್’ಔಟ್ (ಮೊಮಿನುಲ್ ಹಕ್ 84; ಉಮೇಶ್ ಯಾದವ್ 25ಕ್ಕೆ 4).
ಭಾರತ: ಪ್ರಥಮ ಇನಿಂಗ್ಸ್ 86.3 ಓವರ್ಗಳಲ್ಲಿ 314 ರನ್ಗಳಿಗೆ ಆಲ್’ಔಟ್ (ರಿಷಭ್ ಪಂತ್ 93; ತೈಜುಲ್ ಇಸ್ಲಾಮ್ 74ಕ್ಕೆ 4, ಶಕಿಬ್ 79ಕ್ಕೆ 4).
ಬಾಂಗ್ಲಾದೇಶ: ಎರಡನೇ ಇನಿಂಗ್ಸ್ 70.2 ಓವರ್ಗಳಲ್ಲಿ 231 ರನ್ಗೆ ಆಲ್ಔಟ್ (ಲಿಟನ್ ದಾಸ್ 73; ಅಕ್ಷರ್ ಪಟೇಲ್ 68ಕ್ಕೆ 3).
ಭಾರತ: ದ್ವಿತೀಯ ಇನಿಂಗ್ಸ್ 47 ಓವರ್’ಗಳಲ್ಲಿ 7 ವಿಕೆಟ್’ಗೆ145 ರನ್ (ಅಕ್ಷರ್ ಪಟೇಲ್ 34, ಶ್ರೇಯಸ್ ಅಯ್ಯರ್ 28*, ಆರ್ ಆಶ್ವಿನ್ 42*; ಮೆಹ್ದಿ ಹಸನ್ ಮಿರಾಝ್ 63ಕ್ಕೆ 5).