ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಐಸಿಯುನಿಂದ ವಾರ್ಡ್’ಗೆ ಸ್ಥಳಾಂತರಿಸಲಾಗಿದೆ.
ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ ಅವರ ಕಾಲು ನೋವು ಇನ್ನೂ ಹಾಗೇ ಇದೆ. ಎಂಆರ್’ಐ ಸ್ಕ್ಯಾನಿಂಗ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
2022 ಡಿಸೆಂಬರ್ 30ರಂದು ಬೆಳಿಗ್ಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದರು. ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ತಲೆ, ಬೆನ್ನು, ಮಂಡಿ, ಕಾಲಿಗೆ ಗಾಯಗಳಾಗಿದ್ದವು. ಅಪಘಾತದಲ್ಲಿ ಕಾರು ಸುಟ್ಟು ಹೋಗಿದ್ದರೂ, ಪಂತ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು.
ರಸ್ತೆ ಗುಂಡಿ ತಪ್ಪಿಸಲು ಹೋಗಿ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದರು.