ಮನೆ ಕಾನೂನು ಚಿಕ್ಕಬಳ್ಳಾಪುರ ಬಳಿ ಆದಿಯೋಗಿ  ಪ್ರತಿಮೆ ಸ್ಥಾಪನೆ ಕಾಮಗಾರಿಗೆ ತಡೆಯಾಜ್ಞೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ

ಚಿಕ್ಕಬಳ್ಳಾಪುರ ಬಳಿ ಆದಿಯೋಗಿ  ಪ್ರತಿಮೆ ಸ್ಥಾಪನೆ ಕಾಮಗಾರಿಗೆ ತಡೆಯಾಜ್ಞೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ

0

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಆವಲಗುರ್ಕಿ ಬಳಿಯಲ್ಲಿ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ನಡೆಸಬಾರದು ಹಾಗೂ ಈ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿ ಚಂಬಳ್ಳಿಯ ಕೃಷಿಕ ಎಸ್.ಕ್ಯಾತಪ್ಪ, ಮಸ್ಟೂರು ಗ್ರಾಮದ ಜಿ‌.ಎಂ.ಶ್ರೀಧರ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್, ರಾಜ್ಯ ಸರ್ಕಾರ ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಕೆರೆ, ಕುಂಟೆ, ಕಂಟಿಗಳು ಹಾಗೂ ಗೋಮಾಳ ವ್ಯಾಪ್ತಿಯ ಜಮೀನನ್ನು ಮಂಜೂರು ಮಾಡಿದೆ. ಇಲ್ಲಿನ ನಂದಿಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ. ಇದರ ಸುತ್ತಮುತ್ತಲಿನ ಜಮೀನನ್ನು ಪರಭಾರೆ ಮಾಡಿರುವ ಕಾರಣ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಭರಿಸಲಾಗದ ಹಾನಿಯಾಗಲಿದೆ ಎಂದು ವಿವರಿಸಿದರು.

ಪರಿಸರದ ಸೂಕ್ಷ್ಮ ವಲಯಕ್ಕೆ ಒಳಪಡುವ ಈ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಾಹಿರ. ಆದ್ದರಿಂದ, ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಶಾ ಯೋಗ ಕೇಂದ್ರವೂ ಸೇರಿದಂತೆ ಹದಿನಾರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.