ಬದುಕಿನಲ್ಲಿ ನಾವು ಏನಾಗಬೇಕು ಎನ್ನುವುದನ್ನು ಡಿಸೈಡ್ ಮಾಡುವುದು, ನಮ್ಮ ತಂದೆ-ತಾಯಿಯೂ ಅಲ್ಲ, ನಮ್ಮ ಮಾರ್ಕ್ಸ್ ಕಾರ್ಡೂ ಅಲ್ಲ, ನಮ್ಮ ಗೆಳೆಯರೂ ಅಲ್ಲ, ದುಡ್ಡೂ ಅಲ್ಲ. ಬದಲಾಗಿ ನಮ್ಮ ಯೋಚನೆ. ಹಾಗಿದ್ರೆ ಯೋಚಿಸಿದ್ದೆಲ್ಲವೂ ಆಗುತ್ತಾ, ಕನಸು ಕಟ್ಟಿದ್ದೆಲ್ಲ ನಿಜವಾಗುತ್ತಾ? ಖಂಡಿತವಾಗಿಯೂ ಆಗುತ್ತದೆ. ಬಟ್ ಒಂದೆರಡು ಕಂಡೀಷನ್. ಕನಸು ಸ್ಪಷ್ಟವಾಗಿರಬೇಕು, ಸ್ಫುಟವಾಗಿರಬೇಕು. ಮತ್ತೆ ಮತ್ತೆ ಕಾಡಬೇಕು. ಮತ್ತು ಅದನ್ನು ನನಸು ಮಾಡಿಕೊಳ್ಳುವ ಶ್ರದ್ಧೆ ಬೇಕು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತು ಇದಕ್ಕೆ ಪೂರಕ. ಕನಸು ಎಂದರೆ ರಾತ್ರಿ ಗಾಢ ನಿದ್ರೆಯಲ್ಲಿ ಬೀಳುತ್ತಲ್ಲ. ಅದಲ್ಲ. ಯಾವ ಕನಸು ನಮ್ಮನ್ನು ನಿದ್ದೆಯೇ ಮಾಡಲಾಗದಂತೆ ಕಾಡುತ್ತದಲ್ಲ, ಅಂತ ಕನಸುಗಳನ್ನು ಕಾಣಬೇಕು.
ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನ, ಸೋಲು-ಗೆಲುವು, ಪಾಸ್-ಫೇಲು, ದುರಂತ-ಸುಖಾಂತ ಎಲ್ಲವೂ ನಿರ್ಧಾರವಾಗೋದು ನಮ್ಮ ಮನಸಿನಲ್ಲಿ, ನಮ್ಮ ಯೋಚನೆಯಲ್ಲಿ. ಯಾಕೆಂದರೆ, ನಮ್ಮ ಯೋಚನೆಗಳು ನಮ್ಮ ವರ್ತನೆ¿åನ್ನು, ನಡೆ ನುಡಿಯನ್ನು ಪ್ರಭಾವಿಸುತ್ತವೆ. ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತವೆ. ದೃಢ ನಿರ್ಧಾರ, ಸಾಧಿಸಲೇಬೇಕೆಂಬ ಇಚ್ಛೆ ಹುಟ್ಟಿದರೆ ತಡೆಯುವ ಶಕ್ತಿ ಜಗತ್ತಿನಲ್ಲಿ ಯಾವುದೂ ಇಲ್ಲ.
ಯೋಚನೆಗಳ ಬಗ್ಗೆ ಎಚ್ಚರ
ಆದರೆ, ಏನನ್ನು ಯೋಚಿಸಬೇಕು ಎನ್ನುವುದು ನಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಬಿ ಕೇರ್ಫುಲ್ ಎಬೌಟ್ ಯುವರ್ ಥಾಟ್ಸ್ ಅನ್ನೋದು ಇದಕ್ಕೆ. ಯಾರ ಮೇಲೆಯೋ ದ್ವೇಷ ಸಾಧಿಸುತ್ತೇನೆ ಎಂದು ಹೊರಡುವುದು, ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚಿಸುವುದು, ಕುತಂತ್ರಗಳನ್ನು ಹೆಣೆಯುವುದು.. ಇದು ಕೂಡಾ ಯೋಚನೆಯೇ. ಇದನ್ನೇ ಯೋಚಿಸಿದರೆ ಅದೂ ಸಫಲವಾಗಬಹುದು. ಆದರೆ, ಬೇಕಾಗಿದ್ದು ಯಾವ ಯೋಚನೆ? ಉತ್ತಮ ಸಂಗತಿಗಳು ಮತ್ತು ಸತ್ಚಿಂತನೆಗಳು.
ಯೋಚನೆ, ಚಿಂತನೆ ಅನ್ನುವುದು ಒಂಥರಾ ವಿಡಿಯೊ ತರ. ಮನಸ್ಸಿನಲ್ಲಿ ಸೀನ್ ಬೈ ಸೀನ್ ಓಡ್ತಾ ಇರುತ್ತದೆ. ಯಾವ ವಿಡಿಯೋ ಓಡ್ತದೆ ಎನ್ನುವುದು ನಿಮ್ಮ ನಿತ್ಯದ ಜೀವನ, ನೀವು ಭೇಟಿ ಮಾಡುವ ಜನಗಳು, ನಿಮ್ಮ ಚಿಂತನೆಗಳನ್ನು ಅವಲಂಬಿಸಿರುತ್ತದೆ. ಕಟುಕ ಮತ್ತು ಯೋಗಿ ಮನೆಯ ಗಿಳಿಗಳ ಹಾಗೆ! ನೀವು ನೀವೊಂದು ದೊಡ್ಡ ಸಾಧನೆ ಮಾಡಬೇಕು ಎಂದರೆ, ನಿಮ್ಮದೇ ಆದ ಹೊಸ ವಿಡಿಯೋ ಒಂದನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಅದನ್ನು ಮತ್ತೆ ಮತ್ತೆ ರಿವೈಂಡ್ ಮಾಡಬೇಕು. ಅದು ಮನಸ್ಸಿನೊಳಗೆ ಮೊದಲು ಅಚ್ಚೊತ್ತಿಕೊಳ್ಳಬೇಕು. ಮತ್ತು ಅದನ್ನು ನಿಧಾನವಾಗಿ ಅನುಷ್ಠಾನಕ್ಕೆ ತರಬೇಕು.
ನಮ್ಮ ಕನಸು ಎನ್ನುವುದು ಒಂದು ಬೀಜದ ಹಾಗೆ. ಅಳಸಂಡೆ ಬೀಜವನ್ನು ಡಬ್ಬದಲ್ಲಿ ಹಾಕಿಟ್ಟರೆ ಅದು ಹಾಗೇ ಇರುತ್ತದೆ. ಕೆಲವು ವಾರ ಕಳೆದ ಮೇಲೆ ಹಾಳಾಗಬಹುದು ಅಷ್ಟೆ. ಅದೇ ಬೀಜವನ್ನು ನೀರಿನಲ್ಲಿ ಹಾಕಿ, ಮರುದಿನ ಬಟ್ಟೆಯಲ್ಲಿ ಕಟ್ಟಿಟ್ಟರೆ ಮೊಳಕೆಯೊಡುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೀಜವನ್ನು ಮಣ್ಣಲ್ಲಿ ಹಾಕಿ, ಅದಕ್ಕೆ ನೀರು ಗೊಬ್ಬರ ಕೊಟ್ಟರೆ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ. ನಮ್ಮ ಕನಸುಗಳು ಬೆಳೆಯಲು ನಾವು ಕೊಡಬೇಕಾದ್ದು ನಮ್ಮ ಗಮನ, ಎಚ್ಚರ, ಆಸಕ್ತಿ ಮತ್ತು ಮಹತ್ವಾಕಾಂಕ್ಷೆ.
ಅದೆಲ್ಲ ಅಷ್ಟು ಸುಲಭಾನಾ?
ಸುಲಭವಾಗಿದ್ದರೆ ಈ ಜಗತ್ತಿನಲ್ಲಿ ಎಲ್ಲರೂ ಸಾಧಕರೇ ಆಗಿಬಿಡುತ್ತಿದ್ದರು. ನಿಜವೆಂದರೆ, ಎಲ್ಲರಿಗೂ ಆ ಶಕ್ತಿ ಇದೆ. ಆದರೆ, ಸಾಗುವ ದಾರಿಯ ಬಗ್ಗೆ ಆಸಕ್ತಿ ಇಲ್ಲ. ನಮ್ಮ ಕನಸುಗಳು ಹುಟ್ಟೋದು ಜಾಗೃತ ಮನಸ್ಸಿನಲ್ಲಿ. ಆದರೆ, ಅದು ಹರಳುಗಟ್ಟೋದು ಸುಪ್ತ ಮನಸ್ಸಿನಲ್ಲಿ. ಜಾಗೃತ ಮನಸ್ಸಿನ ದೃಢ ನಿರ್ಧಾರಗಳನ್ನು ಸುಪ್ತ ಮನಸ್ಸಿಗೆ ನಿಧಾನವಾಗಿ ಮತ್ತು ವ್ಯವಸ್ಥಿತವಾಗಿ ಶಿಫ್ಟ್ ಮಾಡಿದರೆ ಅದು ಗಟ್ಟಿಗೊಳ್ಳುತ್ತದೆ.
ಆರಂಭಕ್ಕೆ ಟೈಮೇ ಇಲ್ಲ
ನಾವಿನ್ನೂ ಯುವಕರು ಬೇಕಾದಷ್ಟು ಟೈಮಿದೆ ಅಂತ ಯೋಚಿಸಬೇಕಾಗಿಲ್ಲ. ಇನ್ನೆಂಥ ಕನಸು ಕಾಣೋದು, ವಯಸ್ಸು 50 ಆಗೋಯ್ತು ಅಂತ ಚಿಂತಿಸಬೇಕಾಗಿಯೂ ಇಲ್ಲ. ಈ ಕನಸು ಮತ್ತು ಸಾಧನೆ ಕಾಲಾತೀತ. ಯಾರು ಯಾವಾಗಬೇಕಾದರೂ ಆರಂಭಿಸಬಹುದು. ಒಮ್ಮೆ ಬೆನ್ನು ಹತ್ತಿದರೆ ಬಿಡದಷ್ಟು ಗಟ್ಟಿತನವನ್ನು ರೂಢಿಸಿಕೊಳ್ಳಬೇಕು ಅಷ್ಟೆ. ಹಾಗಿದ್ದರೆ ಈ ಕ್ಷ ಣದಿಂದಲೇ ಶುರುವಾಗಲಿ ಹೊಸ ಕನಸುಗಳ ಹುಡುಕಾಟ, ಅದನ್ನು ನನಸು ಮಾಡಿಕೊಳ್ಳುವ ಆಟ.
ಕನಸ ನಿಜಗೊಳಿಸುವುದು ಹೀಗೆ
* ನೀವು ಸಾಧಿಸಬೇಕೆಂದು ಬಯಸಿದ ಸಂಗತಿ, ಏರಬೇಕಾದ ಎತ್ತರ ನಿಮ್ಮ ಕಣ್ಣಿನಲ್ಲಿ ಕಟ್ಟಿಕೊಂಡಿರಬೇಕು. ಕಣ್ಮುಚ್ಚಿದರೆ ಅದೊಂದು ವಿಯೋ ಓಡುತ್ತಿರಬೇಕು.
* ಆ ಮನಸಿನ ವಿಡಿಯೋದಲ್ಲಿ ಪ್ರತಿ ಸಣ್ಣ ವಿವರವೂ ಇರಬೇಕು. ಬಣ್ಣ ಬಣ್ಣದ ಚಿತ್ರ, ಹಿತವಾದ ಸಂಗೀತ, ಮಧುರವಾದ ಘಮ ಮತ್ತು ಲೈಫ್ ಇರಬೇಕು.
* ಈ ವಿಡಿಯೋ ಆಗಾಗ ರಿಪೀಟ್ ಆಗ್ತಿರಬೇಕು, ಜಾಗೃತ ಮನಸ್ಸಿನಿಂದ ಸುಪ್ತ ಮನಸಿಗೆ ವರ್ಗವಾಗಬೇಕು.