ಮನೆ ರಾಜ್ಯ ಫೆ.10 ಹಾಗೂ 11ರಂದು ಮೈಸೂರಿನಲ್ಲಿ ‘ಬೈಟ್ಸ್‌’ ಸಮಾವೇಶ

ಫೆ.10 ಹಾಗೂ 11ರಂದು ಮೈಸೂರಿನಲ್ಲಿ ‘ಬೈಟ್ಸ್‌’ ಸಮಾವೇಶ

0

ಮೈಸೂರು: ರಾಜ್ಯದಲ್ಲಿ ವೃತ್ತಿಪರ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಐಟಿ ಉದ್ದಿಮೆಗೆ ಅಗತ್ಯವಾದ ಮಾನವ ಸಂಪನ್ಮೂಲದ ಬೆಳವಣಿಗೆಯ ಗುರಿ ಹೊಂದಿರುವ ‘ಐಟಿ ಶಿಕ್ಷಣ ಮಾನದಂಡಗಳ ಮಂಡಲಿ’ಯು (ಬೈಟ್ಸ್‌) ಫೆ.10 ಮತ್ತು 11ರಂದು ಮೈಸೂರಿನ ಇನ್ಫೋಸಿಸ್‌   ಲರ್ನಿಂಗ್‌ ಕ್ಯಾಂಪಸ್‌’ನಲ್ಲಿ ತನ್ನ 4ನೇ ಸಮಾವೇಶವನ್ನು ಹಮ್ಮಿಕೊಂಡಿದೆ

ಕೈಗಾರಿಕಾ ಕ್ರಾಂತಿ 4.0: ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಕುರಿತು ನಡೆಯಲಿರುವ ಸಮಾವೇಶದಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಉದ್ಘಾಟಿಸಲಿದ್ದಾರೆ

ಇದೇ ಸಂದರ್ಭದಲ್ಲಿನ ಅವರು ಮುಂದಿನ ಮೂರು ವರ್ಷಗಳಲ್ಲಿ ಸಾಧಿಸಬೇಕಾದ ಹಲವು ಮಹತ್ತ್ವದ ಗುರಿಗಳನ್ನು ಇಟ್ಟುಕೊಂಡಿರುವ ‘ಬೈಟ್ಸ್‌ ಉನ್ನತಿ’ ಕಾರ್ಯಕ್ರಮವಕ್ಕೂ ಚಾಲನೆ ನೀಡಲಿದ್ದಾರೆ.

‘ಬೈಟ್ಸ್ ಉನ್ನತಿ’ಯಡಿಯಲ್ಲಿ ರಾಜ್ಯದ ಗ್ರಾಮೀಣ ಭಾಗಗಳ 10 ಸಾವಿರ ವಿದ್ಯಾರ್ಥಿಗಳಿಗೆ ಉದ್ಯಮಕ್ಕೆ ಅಗತ್ಯವಾದ ತರಬೇತಿ ನೀಡಲಾಗುವುದು. ಸುಮಾರು ಒಂದು ಸಾವಿರ ಕಂಪನಿಗಳು ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯ ಮೂಲಕ ಈ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಆಯ್ಕೆ ಮಾಡಿಕೊಳ್ಳಲಿವೆ.

ಇದರೊಂದಿಗೆ, ಒಂದು ಸಾವಿರ ವಿದ್ಯಾರ್ಥಿನಿಯರಿಗೆ ಕಾರ್ಪೊರೇಟ್‌ ಸ್ಕಾಲರ್‍‌ಶಿಪ್‌ ಕೊಡಲಾಗುವುದು ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಬೋಧಕರಿಗೆ ಪ್ರಮಾಣಪತ್ರ ಸಹಿತ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು.

ಸಮಾವೇಶದಲ್ಲಿ ಉದ್ಯಮಗಳ ಪರಿಣತರು ವಿವಿಧ ಗೋಷ್ಠಿಗಳಲ್ಲಿ ಮಾತನಾಡಲಿದ್ದು, ಒಟ್ಟು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ‘ಬೈಟ್ಸ್ ಉನ್ನತಿ’ ಉಪಕ್ರಮದಿಂದ 16 ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸಹಿತ ಒಟ್ಟು 100 ಎಂಜಿನಿಯರಿಂಗ್ ಕಾಲೇಜುಗಳಿಗೆ ಲಾಭವಾಗಲಿದೆ. ಇದಕ್ಕೆ ಟಿಸಿಎಸ್‌, ಇನ್ಫೋಸಿಸ್‌,  ವಿಪ್ರೋ,      ಪರ್ಸಿಸ್ಟೆಂಟ್‌, ನೌಕರಿ ಮುಂತಾದ ಉದ್ದಿಮೆಗಳು ಕೈಜೋಡಿಸಿವೆ.