ಮನೆ ರಾಜ್ಯ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿತ; ಗುಡುಗಿದ ಲೋಕಾಯುಕ್ತ ನ್ಯಾ. ಪಾಟೀಲ್‌

ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿತ; ಗುಡುಗಿದ ಲೋಕಾಯುಕ್ತ ನ್ಯಾ. ಪಾಟೀಲ್‌

0

ಬೆಂಗಳೂರು : ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿತದ ಭೀಕರ ದುರಂತವನ್ನು ಲೋಕಾಯುಕ್ತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಏಳು ಮಂದಿಯ ಬಲಿತೆಗೆದುಕೊಂಡ ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಇಂದು ಮಧ್ಯಾಹ್ನ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಮತ್ತು ಉಪಲೋಕಾಯುಕ್ತರು ದುರಂತ ಸಂಭವಿಸಿದ ಬೌರಿಂಗ್ ಆಸ್ಪತ್ರೆಯ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ವೀಕ್ಷಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತರು, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದು ಅಕ್ಷರಶಃ ನಿರ್ಲಕ್ಷ್ಯದ ಪರಮಾವಧಿ. ಸಾರ್ವಜನಿಕರು ಓಡಾಡುವ ಜಾಗದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಜಿಬಿಎ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಪಷ್ಟ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎಂದು ನ್ಯಾ. ಬಿ.ಎಸ್. ಪಾಟೀಲ್ ಸಿಟ್ಟು ಹೊರಹಾಕಿದರು. ಈ ದುರಂತಕ್ಕೆ ಸಂಬಂಧಿಸಿದಂತೆ ಕೇವಲ ಕೆಳಹಂತದ ಸಿಬ್ಬಂದಿಯನ್ನಲ್ಲ, ಬದಲಿಗೆ ಆಡಳಿತ ಯಂತ್ರದ ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಲೋಕಾಯುಕ್ತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತರು ಅತ್ಯಂತ ಮಹತ್ವದ ಘೋಷಣೆ ಮಾಡಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್‌, ನಗರದ ಐದೂ ಪಾಲಿಕೆಗಳ ಆಯುಕ್ತರು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಜಲಮಂಡಳಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಾವು ಎಲ್ಲರನ್ನೂ ಪಾರ್ಟಿ ಮಾಡಿ ಕೇಸ್ ನಡೆಸುತ್ತೇವೆ. ಯಾರೇ ಆಗಿರಲಿ, ವಿಧಾನಸಭಾ ಸದಸ್ಯರಾಗಿದ್ದರೂ ಸರಿಯೇ, ತಪ್ಪು ಮಾಡಿದ್ದರೆ ಕ್ರಮ ಆಗೇ ಆಗುತ್ತದೆ. ಶೀಘ್ರದಲ್ಲೇ ಎಲ್ಲರಿಗೂ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸುತ್ತೇವೆ ಎಂದು ಗುಡುಗಿದರು.

ಒಂದೇ ಮಳೆಗೆ ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮರದ ರೆಂಬೆಗಳನ್ನು ತೆರವುಗೊಳಿಸುವಂತಹ ಪ್ರಾಥಮಿಕ ಕೆಲಸಗಳು ಏಕಾಗಿಲ್ಲ? ಗೋಡೆಗಳು ಶಿಥಿಲವಾಗಿದ್ದರೂ ವ್ಯಾಪಾರಕ್ಕೆ ಅನುಮತಿ ನೀಡಿದ್ದು ಯಾಕೆ? ವಿದ್ಯುತ್‌ ಹೊಡೆದು ಸಾವು ಸಂಭವಿಸಿದ ಪ್ರಕರಣಗಳಲ್ಲೂ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲವೇಕೆ? ವೈದ್ಯಕೀಯ ಶಿಕ್ಷಣ ಇಲಾಖೆಯು ಈ ತಡೆಗೋಡೆಯ ಬಗ್ಗೆ ಯಾವುದೇ ಗಮನಹರಿಸಿರಲಿಲ್ಲವೇ ಎಂದು ಪ್ರಶ್ನೆ ಕೇಳಿದ್ದಾರೆ.

ಈ ದುರಂತಕ್ಕೆ ಸಂಬಂಧಿಸಿದಂತೆ ತಕ್ಷಣವೇ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ವರದಿ ಕೇಳಲಾಗಿದ್ದು, ಶೀಘ್ರದಲ್ಲೇ ಸಲ್ಲಿಸಲು ಸೂಚಿಸಲಾಗಿದೆ. ಅಷ್ಟೇ ಅಲ್ಲದೆ, ನಗರದಲ್ಲಿರುವ ಇಂತಹ ಇತರ ಶಿಥಿಲಾವಸ್ಥೆಯ ಕಟ್ಟಡಗಳು ಮತ್ತು ಗೋಡೆಗಳನ್ನು ಗುರುತಿಸಿ ತಕ್ಷಣವೇ ತೆರವುಗೊಳಿಸಲು ಲೋಕಾಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.