ಹೊಸಕೋಟೆ (ಬೆಂ.ಗ್ರಾ): ವಾಟರ್ ಹೀಟರ್’ನಿಂದ ವಿದ್ಯುತ್ ಪ್ರವಹಿಸಿ ತಾಯಿ, ಮಗು ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ.
ರಾಯಚೂರು ಮೂಲದ ತಾಯಿ ಜ್ಯೋತಿ ಮತ್ತು ಮಗ ಜಯಾನಂದ್(4) ಮೃತ ದುರ್ದೈವಿಗಳು.
ಭಾನುವಾರ ಮಧ್ಯಾಹ್ನ ಜ್ಯೋತಿ ಅವರು ಶೌಚಾಲಯದಲ್ಲಿ ನೀರು ಕಾಯಿಸಲು ಹೀಟರ್ ಹಾಕಿದ್ದರು. ಈ ವೇಳೆ, ಶೌಚಾಲಯಕ್ಕೆ ಬಾಲಕ ತೆರಳಿದ್ದು ಹೀಟರ್ ಅನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ.
ಈ ವೇಳೆ, ಆತನಿಗೆ ಕರೆಂಟ್ ಶಾಕ್ ಹೊಡೆದಿದೆ. ಶಾಕ್’ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ಪ್ರವಹಿಸಿದ್ದು ತಾಯಿ, ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜ್ಯೋತಿ ಮತ್ತು ಅವರ ಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.