ಮನೆ ರಾಜಕೀಯ ಲೋಕಾಯುಕ್ತ ಬಂದ್ ಮಾಡಲಿಲ್ಲ, ಹಲ್ಲು ಕಿತ್ತಿದ್ದರು : ಸಿಎಂ ಬೊಮ್ಮಾಯಿ

ಲೋಕಾಯುಕ್ತ ಬಂದ್ ಮಾಡಲಿಲ್ಲ, ಹಲ್ಲು ಕಿತ್ತಿದ್ದರು : ಸಿಎಂ ಬೊಮ್ಮಾಯಿ

0

ಮೈಸೂರು: ಅವರು ಲೋಕಾಯುಕ್ತ ಬಂದ್ ಮಾಡಲಿಲ್ಲ. ಆದ್ರೆ ಲೋಕಾಯುಕ್ತದ ಎಲ್ಲಾ ಹಲ್ಲುಗಳನ್ನ ಕಿತ್ತಿದ್ದರು. ಹಲ್ಲು ಕಿತ್ತ ಮೇಲೆ ಇದ್ದರೆ ಎಷ್ಟು ಇಲ್ಲದಿದ್ದರೆ ಎಷ್ಟು ಎಂದು ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಮೈಸೂರಿನ ಮಂಡಕಳ್ಳಿ ವಿಮಾನ‌ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಕಾಲದಲ್ಲಿ ಲೋಕಾಯುಕ್ತ ಇದಿದ್ದರೆ ಎಸಿಬಿಗೆ ಏಕೆ ಕೇಸ್ ಗಳು ವರ್ಗಾವಣೆ ಆಗುತ್ತಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಂದ್ ಗೆ ಬೆಲೆ ಇಲ್ಲ

ಮಾರ್ಚ್ 9 ರಂದು ಕಾಂಗ್ರೆಸ್ ಕರೆ ನೀಡಿರುವ ಬಂದ್’ಗೆ ಯಾವ ಬೆಲೆಯೂ ಇಲ್ಲ. ಎರಡು ಗಂಟೆ ಬಂದ್ ಅಂದ್ರೆ ಅರ್ಥ ಏನು? ಯಾವತ್ತಾದ್ರು ಇಂತಹ ಬಂದ್ ಬಗ್ಗೆ ಕೇಳಿದ್ದೀರಾ ? ಇದನ್ನ ಬಂದ್ ಅನ್ನುತ್ತಾರಾ? ಭ್ರಷ್ಟಚಾರ ಮಾಡಿದವರು ಜೈಲಿಗೆ ಹೋಗಿ ಬಂದವರು, ಇವರು ಇಂಥ ಬಂದ್ ಗೆ ಕರೆ ಕೊಟ್ಟರೆ ಜನರ ಮುಂದೆ ನಡೆಯುತ್ತಾ. ಈ ಬಂದ್ ಗೆ ಯಾವ ಬೆಲೆಯೂ ಇಲ್ಲ ಎಂದು ವ್ಯಂಗ್ಯವಾಡಿದರು.

ಅದೇ ದಿನ ಪರೀಕ್ಷೆಗಳಿವೆ. ಜನ ಸಾಮನ್ಯರಿಗೆ ತೊಂದರೆಯಾಗುತ್ತದೆ. ಇದು ಅವರಿಗೆ ಅರ್ಥವಾಗುವುದಿಲ್ಲ. ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ಹೇಳಿದರು.

ಮಾಡಾಳು ವಿರೂಪಾಕ್ಷ ಅವರಿಗೆ ಹೈ ಕೋರ್ಟ್ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಹೈ ಕೋರ್ಟ್ ತೀರ್ಮಾನವನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದರು.

ಬಿಜೆಪಿಯದ್ದು 40% ಸಂಕಲ್ಪ ಯಾತ್ರೆ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರದ್ದು 100% ಗಾಗಿ ಪ್ರಜಾಧ್ವನಿ ಯಾತ್ರೆ ಎಂದು ನಾನು ಹೇಳುತ್ತೇನೆ. ಅವರಿಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಭ್ರಷ್ಟಚಾರದಲ್ಲಿ ಅವರ ಕೈಗಳೇ ಕಪ್ಪಾಗಿವೆ ಎಂದು ಆರೋಪಿಸಿದರು

ಸಿದ್ದರಾಮಯ್ಯ ರಸ್ತೆ ಪರಿಶೀಲಿಸಲು ತಕರಾರೇನು ಇಲ್ಲ

ಬೆಂಗಳೂರು ಮೈಸೂರು ಹೈವೆ ಕ್ರೆಡಿಟ್ ವಿಚಾರ. ಈ ರಸ್ತೆಯ ಕ್ರೆಡಿಟ್ ಕಾಂಗ್ರೆಸ್ ಹೇಗೆ ಸಲ್ಲುತ್ತೆ ಹೇಳಿ. ರಸ್ತೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ‌. ರಸ್ತೆ ಮಾಡುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದನ್ನ ಸಿದ್ದರಾಮಯ್ಯ ಹೇಗೆ ಮಾಡುತ್ತಾರೆ. ಕಾಂಗ್ರೆಸ್ ಮಾತು ಕೇಳಿದರೆ ಜನ ನಗುತ್ತಾರೆ‌. ರಸ್ತೆ ವಿಸ್ತೀರ್ಣ ಆಗಬೇಕೆಂಬ ಪ್ರಸ್ತಾವನೆ 20 ವರ್ಷಗಳ ಹಿಂದೆಯೇ ಇತ್ತು. ಸಿದ್ದರಾಮಯ್ಯ ಅವರ ಅವಧಿ ಅದೇನು ಮೊದಲ ಬಾರಿ ಪ್ರಸ್ತಾಪ ಆಗಿದ್ದಲ್ಲ. ಪ್ರಸ್ತಾಪ ಮಾಡುವುದಕ್ಕೂ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುವುದಕ್ಕೂ ವ್ಯತ್ಯಾಸ ಇದೆ. ಸಿದ್ದರಾಮಯ್ಯನವರು ರಸ್ತೆ ಪರಿಶೀಲನೆ ಮಾಡಲಿ. ನಮ್ಮ ತಕರಾರು ಏನು ಇಲ್ಲ. ಸಾವಿರಾರು ಜನರು ಈಗಾಗಲೇ ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.

ಆರೋಪ ಸರಿ ಇದ್ದರೆ ಸೂಕ್ತ ನಿರ್ಧಾರ

ಸಿದ್ದರಾಮಯ್ಯ ಮೇಲೆ ಕಾಫಿ, ಟೀ  ಆರೋಪ ಕುರಿತು ಮಾತನಾಡಿ, ಏನು ಆರೋಪಗಳಿವೆ ಎಂಬುದು ಗೊತ್ತಿಲ್ಲ. ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ. ಮೊದಲು ದಾಖಲೆ ತರಿಸಿಕೊಂಡು ನೋಡುತ್ತೇನೆ.  ಆರೋಪಗಳು ಸರಿ ಇದ್ದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.