ಮನೆ ಸುದ್ದಿ ಜಾಲ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಪರಿಣಾಮಕಾರಿ ಅನುಷ್ಠಾನ: ಸುಭಾಷ್ ಡಿ ಆಡಿ

ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯ ಪರಿಣಾಮಕಾರಿ ಅನುಷ್ಠಾನ: ಸುಭಾಷ್ ಡಿ ಆಡಿ

0

ಮೈಸೂರು: ಜಿಲ್ಲೆಯ ಪುರಸಭೆ, ನಗರಸಭೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ, ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಖ್ಯಸ್ಧರಾದ ಸುಭಾಷ್ ಡಿ ಆಡಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ಮನೆಯಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ನಗರದ ಸ್ಥಳೀಯ ಸಂಸ್ಥೆಗಳ ಕಸದ ವಾಹನಗಳಲ್ಲೇ ಹಾಕಬೇಕು. ಸ್ವಚ್ಛತಾ ಕ್ರಮಗಳ ಪಾಲನೆ ಕುರಿತು ಕರಪತ್ರ, ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಹೆಚ್ಚಿನ ಅರಿವು ಮೂಡಿಸುವ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮಾಡ ಬೇಕು. ಹೆಚ್ಚು ಕಸ ಶೇಕರಣೆಯಾಗುವ ಜಾಗಗಳನ್ನು ಗುರುತಿಸಿ ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಎಲ್ಲೆಂದರಲ್ಲಿ ಕಸ ಬೀಸಾಡಿ ಹೋಗುವುದನ್ನು ತಡೆಗಟ್ಟಿದಂತಾಗುತ್ತದೆ ಎಂದು ಸೂಚಿಸಿದರು.

ಪೌರ ಕಾರ್ಮಿಕರು ವಾಹನದ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿಬೇಕು. ಈ ವೇಳೆ ತ್ಯಾಜ್ಯ ಬೇರ್ಪಡಿಸಿಬೇಕು. ಬೀದಿಬದಿ ಹಾಗೂ ಸಂತೆಯ ವ್ಯಾಪಾರಿ ಸಂಜೆ ವೇಳೆ ಕಸವನ್ನು ರಸ್ತೆ ಬದಿಗೆ ಎಸೆದು ಹೋಗುತ್ತಾರೆ. ಇದನ್ನು ನಿಯಂತ್ರಿಸಲು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ನಗರದಲ್ಲಿ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ಕೆಡವುವುದು ಹಾಗೂ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಮಣ್ಣು, ಕಬ್ಬಿಣ, ಜೆಲ್ಲಿ ಹಾಗೂ ಸಿಮೆಂಟ್ ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯುವುದನ್ನು ತಪ್ಪಿಸುವ ಉದ್ದೇಶದಿಂದ ಒಂದು ಜಾಗ ಗುರುತಿಸಿ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿ ಅಲ್ಲಿ ತ್ಯಾಜ್ಯವನ್ನು ರವಾನಿಸಿ ಸಂಸ್ಕರಣೆ ಮಾಡಬೇಕು ಎಂದು ಅವರು ತಿಳಿಸಿದರು.

ಸಾಮಾನುಗಳು ಮತ್ತು ಸರಕುಗಳನ್ನು ತುಂಬಲು ವಿಪರೀತವಾಗಿ ಪರಿಸರಕ್ಕೆ ಅಪಾಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಅನ್ನು ಬಳಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ಮೈಸೂರು ಸಾಂಸ್ಕೃತಿಕ ನಗರಿ, ಪ್ರವಾಸಿ ತಾಣ, ದಕ್ಷಿಣ ಕರ್ನಾಟಕದ ದೊಡ್ಡ ನಗರ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂತಹ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಪ್ರಮುಖ ಕಾರ್ಯವಾಗಿದ್ದು, ಡಿಜಿಟಲ್ ಜಾಹಿರಾತುಗಳಿಗೆ ಹೆಚ್ಚು ಆದ್ಯತೆ ನೀಡಿ, ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಪ್ರತಿಯೊಬ್ಬರೂ ರಾಯಭಾರಿಯಾಗಿ ಕೆಲಸ ಮಾಡಬೇಕು. ಶೂನ್ಯ ಪ್ಲಾಸ್ಟಿಕ್ ಪ್ರದೇಶಗಳಾಗಿ ಮಾರ್ಪಡಿಸಬೇಕು. ಕಸ ಮುಕ್ತ ಪ್ರದೇಶಗಳನ್ನು ಮಾದರಿ ಸ್ಥಳಗಳನ್ನಾಗಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಕೆಲಸಗಳಾಗಬೇಕು. ಅಧಿಕಾರ ವಿಕೇಂದ್ರಿಕರಿಸಿ ವ್ಯವಸ್ಥೆಯೊಳಗೆ ಕೆಲಸಗಳನ್ನು ನಿರ್ವಹಿಸುವುದರಿಂದ ಸಮಸ್ಯೆ ಬಗೆ ಹರಿಸಬಹುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಶೇ.90ರಷ್ಟು ಅರ್ಬನ್ ಲೋಕಲ್ ಬಾಡಿ ಇದೆ. ಮೈಸೂರಿನಲ್ಲಿ ಶೇ.80 ರಷ್ಟು ತ್ಯಾಜ್ಯ ಸಂಗ್ರಹ ಕೆಲಸವಾಗುತ್ತಿದೆ. ಇದರಲ್ಲಿ ಶೇ. 60 ರಷ್ಟು ಗೊಬ್ಬರವಾಗುತ್ತಿದೆ. ಚಿಕನ್, ಮಟನ್ ವೇಸ್ಟ್ ಗಳಿಗೆ ಸಂಬಂಧಿಸಿದಂತೆ ದೂರುಗಳು ಹೆಚ್ಚಾಗಿ ಬರುತ್ತಿದ್ದು, ಪ್ರತ್ಯೇಕವಾಗಿ ಅವುಗಳನ್ನು ಸಂಗ್ರಹಿಸಿ ಮೀನು ಸಾಕಾಣಿಕಾ ಕೇಂದ್ರಗಳಿಗೆ ತಲುಪಿಸುವುದು ಹಾಗೂ ಕೈಗಾರಿಕೆಗಳ ಜೊತೆಗೂಡಿ ಮತ್ತಷ್ಟೂ ಕ್ರಮವಹಿಸಲಾಗುವುದು ಎಂದರು.

ಬಯೋ ವೇಸ್ಟ್ ಮ್ಯಾನೇಜ್‌ಮೆಂಟ್ ಬಹಳ ಪ್ರಮುಖವಾಗಿದ್ದು, ಈ ತ್ಯಾಜ್ಯಗಳ ನಿರ್ವಹಣೆ ಸರಿಯಾದ ರೀತಿಯಲ್ಲಾಗಬೇಕು. ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ. ಈ ಕುರಿತು ವರ್ಕಿಂಗ್ ವುಮೆನ್ ಹಾಸ್ಟೆಲ್ಸ್, ಹಾಸ್ಪಿಟಲ್ಸ್ ಹಾಗೂ ಮುಂತಾದ ಕಡೆಗಳಲ್ಲಿ ಅರಿವು ಮೂಡಿಸಬೇಕು. ಈ ವೇಸ್ಟ್ ಕಲೆಕ್ಷನ್ ಕೇಂದ್ರಗಳನ್ನು ಸ್ಥಾಪಿಸಿ ತ್ಯಾಜ್ಯವನ್ನು ಸಂಗ್ರಹ ಮಾಡಬೇಕು. ಪೋಸ್ಟರ್ಸ್, ಬ್ಯಾನರ್, ಕಟೌಟ್‌ಗಳಿಗೆ ಕಡಿವಾಣ ಹಾಕಿ ಇನ್ನು ಮುಂದೆ ನಿಗಧಿತ ಸ್ಥಳದಲ್ಲಿ ಮಾತ್ರ ಡಿಜಿಟಲ್ ಬ್ಯಾನರ್‌ಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ದೇವರಾಜ್ ಭೂತೇ ಅರಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನಂದಿನಿ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಮುತ್ತುರಾಜ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.