ಮನೆ ರಾಜಕೀಯ ಸಿಎಂ ಬೊಮ್ಮಾಯಿಗೆ ಸುದೀಪ್ ಬೆಂಬಲ: ದೊಡ್ಡ ಪ್ರಯೋಜನವಾಗದು ಎಂದ ಹೆಚ್.ಡಿ ಕುಮಾರಸ್ವಾಮಿ

ಸಿಎಂ ಬೊಮ್ಮಾಯಿಗೆ ಸುದೀಪ್ ಬೆಂಬಲ: ದೊಡ್ಡ ಪ್ರಯೋಜನವಾಗದು ಎಂದ ಹೆಚ್.ಡಿ ಕುಮಾರಸ್ವಾಮಿ

0

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಟ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಆದರೆ, ಇದರಿಂದ ದೊಡ್ಡ ಪ್ರಯೋಜನವಾಗದು ಎಂದು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಮೇಲಿನ ವಿಶ್ವಾಸದಿಂದ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದು, ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದರಿಂದ ಪ್ರಯೋಜನವಾಗದು ಎಂದು ಹೇಳಿದ್ದಾರೆ.

ನಟರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ನಟರನ್ನು ನೋಡಲು ಜನರು ಬರುತ್ತಾರೆ. ಕೆಲವು ಕಡೆ ಕಾಂಗ್ರೆಸ್ ಪರ, ಕೆಲವು ಕಡೆ ಬಿಜೆಪಿ ಪರ ಪ್ರಚಾರ ಮಾಡುವ ನಟರು ಇದ್ದಾರೆ. ಆದರೆ ಅವರೆಲ್ಲ ಒಂದು ಪಕ್ಷಕ್ಕೆ ಸ್ಥಿರವಾಗಿ ಪ್ರಚಾರ ಮಾಡುವುದಿಲ್ಲ. ಅವರವರ ಬಾಂಧವ್ಯದ ಮೇಲೆ ಪ್ರಚಾರಕ್ಕೆ ಬರುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.

ನನ್ನ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಕೆಲವು ಕಡೆ ಪ್ರಚಾರಕ್ಕೆ ಬರಲಿದ್ದಾರೆ. ಯಾವ ಚಿತ್ರ ನಟರನ್ನು ಕೂಡಾ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಟರಲ್ಲಿ ಎಲ್ಲಾ ವರ್ಗದ ಜನರಿಗೂ ಬೇಕಾದವರು ಇರುತ್ತಾರೆ. ಹೀಗೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಹಾಳು ಮಾಡಬಾರದು ಎಂದು ಹೇಳಿದರು.