ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ತಡೆಗೋಡೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ತಡೆಗೋಡೆ ಬೀಳುವ ಆತಂಕ, ಅಪಾಯ ಇದೆ.
10 ಕಿಲೋ ಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಫ್ಲೈಓರ್ ನ ಮಧ್ಯ ಭಾಗ ಲೇಬೈ ಬಳಿ ಬಿರುಕು ಬಿಟ್ಟಿದೆ. ಕೆಲ ತಿಂಗಳ ಹಿಂದೆ ಇದೇ ಲೇಬೈ ಬಳಿ ಅಪಘಾತವಾಗಿತ್ತು.
ಇತ್ತೀಚೆಗೆ ಅಪಘಾತದಲ್ಲಿ ತಡೆಗೋಡೆ ಬಿರುಕುಬಿಟ್ಟಿತ್ತು. ಆದರೆ ತಡೆಗೋಡೆ ದುರಸ್ತಿ ಮಾಡದೆ, BETPL ಸಂಸ್ಥೆ ಹಾಗೆಯೇ ಬಿಟ್ಟಿದೆ. ಗೋಡೆ ಬದಲಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಅದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈ. ಲಿ (Bangalore Elevated Toll Way PL – BETPL) ಸಿಬ್ಬಂದಿ ಬಿರುಕು ಬಿಟ್ಟಿರುವ ಜಾಗದಲ್ಲಿ ಬ್ಯಾರಿಕೇಡ್ ಇಟ್ಟು ಬಿಟ್ಟಿದ್ದಾರೆ ಅಷ್ಟೆ. ಇನ್ನು ತಡೆಗೋಡೆ ಬಿದ್ದರೆ ನೇರವಾಗಿ ವಾಹನ ಸವಾರರ ನೆತ್ತಿಯ ಮೇಲೆಯೇ ಬೀಳುವ ಆತಂಕವಿದೆ.
ಟೋಲ್ ಮತ್ತು ರೋಡ್ ನಿರ್ವಾಹಣೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಡೆಯುವ BETPL, ತೇಪೆ ಕಾರ್ಯ ಮಾಡುವ ಮೂಲಕ ಬೇಜಾವಾಬ್ದಾರಿ ಮೆರೆಯುತ್ತಿದೆ ಎಂದು ವಾಹನ ಸವಾರರು ಗೊಣಗಿಕೊಂಡೇ ಸಂಚರಿಸುತ್ತಿದ್ದಾರೆ.