ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಿದ್ದ ಕಳಪೆ ಗುಣಮಟ್ಟದ ಗ್ಯಾಸ್ ಸ್ಟೌ ಸಿಡಿದಿರುವ ಘಟನೆ ಮಂಗಳವಾರ ತಾಲ್ಲೂಕಿನ ಪುರ ಗ್ರಾಮದಲ್ಲಿ ನಡೆದಿದೆ.
ಮಹಿಳಾ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚುನಾವಣೆ ಘೋಷಣೆಗೂ ಮುನ್ನವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮನೆ, ಮನೆಗೂ ಗ್ಯಾಸ್ ಸ್ಟೌ ಹಂಚಲಾಗಿತ್ತು.
ಪುರ ಗ್ರಾಮದ ವೆಂಕಟೇಶ್ ಎಂಬು ವರ ಪತ್ನಿ ಸ್ಟೌ ಮೇಲೆ ಬೇಳೆ ಬೇಯಿಸಲು ಇಟ್ಟು ಹೊರಗಡೆ ಕೆಲಸದಲ್ಲಿ ನಿರತರಾಗಿದ್ದರು. ಕೆಲ ಸಮಯದ ಬಳಿಕ ಅಡುಗೆ ಮನೆಯಿಂದ ಸ್ಫೋಟದ ಸದ್ದು ಕೇಳಿದೆ. ಒಳಹೋಗಿ ನೋಡಿದಾಗಿ ಸ್ಟೌ ಸಿಡಿದು ಛಿದ್ರಗೊಂಡಿತ್ತು. ಅದರ ಮೇಲೆ ಇಟ್ಟಿದ್ದ ಕುಕ್ಕರ್ ಕೆಳಗೆ ಬಿದ್ದಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
‘ನೀವು ಉಡುಗೊರೆಯಾಗಿ ಕೊಟ್ಟ ಕಳಪೆ ಸ್ಟೌನಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಜವಾಬ್ದಾರಿ’ ಎಂದು ವೆಂಕಟೇಶ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಟೌ ಸ್ಫೋಟಗೊಂಡ ಬಳಿಕ ಅದರ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣ ಪಕ್ಷದ ಸ್ಥಳೀಯ ಮುಖಂಡರು ಮತ್ತು ಅಭ್ಯರ್ಥಿಯ ಫೌಂಡೇಶನ್ ಕಡೆಯುವರು ಸ್ಫೋಟವಾಗಿದ್ದ ಸ್ಟೌ ಕೊಂಡೊಯ್ದಿದ್ದಾರೆ.
ಈ ಘಟನೆಯ ನಂತರ ಭಯಗೊಂಡಿರುವ ಗ್ರಾಮದ ಮಹಿಳೆಯರು ತಮ್ಮ ಮನೆಗಳಿಗೂ ಉಡುಗೊರೆಯಾಗಿ ನೀಡಿದ್ದ ಸ್ಟೌ ಬಳಕೆಗೆ ಹಿಂಜರಿಯುತ್ತಿದ್ದಾರೆ. ಕಳಪೆ ಗುಣಮಟ್ಟದ ಸ್ಟೌ ಕೊಟ್ಟ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆಯೂ ಇದೇ ಅಭ್ಯರ್ಥಿ ನೀಡಿದ್ದ ಸ್ಟೌ ಸಿಡಿದು ಮಹಿಳೆಯ ಕೈ ಸುಟ್ಟಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.