ಮನೆ ಕಾನೂನು ಜಾಮೀನು ಕೋರಿದ ಪ್ರಕರಣಗಳಲ್ಲಿ ತಡ ಮಾಡದೆ ಆದೇಶ ಮಾಡಬೇಕು; ವಿಸ್ತೃತ ಜಾಮೀನು ಆದೇಶಕ್ಕೆ ತಡೆ ಒಡ್ಡಬೇಕು:...

ಜಾಮೀನು ಕೋರಿದ ಪ್ರಕರಣಗಳಲ್ಲಿ ತಡ ಮಾಡದೆ ಆದೇಶ ಮಾಡಬೇಕು; ವಿಸ್ತೃತ ಜಾಮೀನು ಆದೇಶಕ್ಕೆ ತಡೆ ಒಡ್ಡಬೇಕು: ಸುಪ್ರೀಂ

0

ದೇಶದಲ್ಲಿರುವ ಎಲ್ಲಾ ನ್ಯಾಯಾಲಯಗಳು ಜಾಮೀನು ಆದೇಶಗಳು ಉದ್ದವಾಗಿರದಂತೆ ಖಾತರಿವಹಿಸಬೇಕು ಮತ್ತು ಅವುಗಳನ್ನು ಸಮಯಕ್ಕೆ ಅನುಗುಣವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ಆದೇಶಿಸಿದೆ.

Join Our Whatsapp Group

 [ಸುಮಿತ್ ಸುಭಾಷ್ಚಂದ್ರ ಗಂಗಾವಾಲ್ ಮತ್ತು ಇತರರು ವರ್ಸಸ್ ಮಹಾರಾಷ್ಟ್ರ ಸರ್ಕಾರ].

ನಾಗರಿಕ ಸ್ವಾತಂತ್ರ್ಯದ ವಿಚಾರಗಳಲ್ಲಿ ನ್ಯಾಯಾಂಗ ಸಂಸ್ಥೆಗಳು ನ್ಯಾಯಬದ್ಧವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಂ ನಾಥ್ ಮತ್ತು ಸಂಜಯ್ ಕರೋಲ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

“ಜಾಮೀನು ಮಂಜೂರು/ತಿರಸ್ಕಾರ/ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಹಂತದಲ್ಲಿ ವಿಸ್ತೃತವಾದ ಸಾಕ್ಷಿ ವಿವರಣೆಯನ್ನು ತಪ್ಪಿಸಬೇಕು. ನಾಗರಿಕ ಸ್ವಾತಂತ್ರ್ಯದ ವಿಚಾರಗಳಲ್ಲಿ ನ್ಯಾಯಾಂಗ ಸಂಸ್ಥೆಗಳು ನ್ಯಾಯಬದ್ಧವಾಗಿ ನಡೆದುಕೊಳ್ಳಬೇಕು. ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಆದೇಶ ಜಾರಿಗೊಳಿಸುವಲ್ಲಿ ಅತಿಯಾದ ವಿಳಂಬವು ಸಾಂವಿಧಾನಿಕ ಸಮ್ಮತಿಗೆ ಹೊಂದಿಕೆಯಾಗುವುದಿಲ್ಲ” ಎಂದು ಪೀಠ ಹೇಳಿದೆ.

ಜಾಮೀನು ಕೋರಿದ್ದ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್ ಆದೇಶವನ್ನು ಐದು ವಾರಗಳ ಕಾಲ ಕಾಯ್ದಿರಿಸಿ ನಂತರ ಪ್ರಕಟಿಸಿತ್ತು, ಅಲ್ಲದೆ ಈ ಆದೇಶವು 13 ಪುಟಗಳಷ್ಟು ಉದ್ದವಾಗಿತ್ತು. ಹೈಕೋರ್ಟ್’ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಇಬ್ಬರು ಪುರುಷರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. ನಿರೀಕ್ಷಣಾ ಜಾಮೀನು ನಿರಾಕರಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿದ್ದ ಸುಪ್ರೀಂ ಕೋರ್ಟ್ ಆರೋಪಿಗಳಿ ಈ ಹಿಂದೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಇದೀಗ ಮಧ್ಯಂತರ ಆದೇಶವನ್ನು ಶಾಶ್ವತ ಆದೇಶವಾಗಿಸಿರುವ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು.