ಮನೆ ಆರೋಗ್ಯ ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

0

ಮೈಸೂರು: ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದ್ದು, ಇದನ್ನು ಅಡುಗೆ ಅಥವಾ ಹಸಿಯಾಗಿ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಉಷ್ಣಾಂಶ ತಗ್ಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೌತೆಕಾಯಿ ಸೇವಿಸಿದಷ್ಟು ಅನುಕೂಲ.

ಸಾಮಾನ್ಯವಾಗಿ ಮಿಡಿ ಸೌತೆಯನ್ನು ಹಸಿಯಾಗಿ ಸೇವಿಸಲು ಬಳಸಲಾಗುತ್ತದೆ. ಉಳಿದಂತೆ ಮಲೆನಾಡುಗಳಲ್ಲಿ ದೊಡ್ಡಗಾತ್ರದ ಸೌತೆಕಾಯಿಯನ್ನು ಬೆಳೆಯಲಾಗುತ್ತದೆ. ಮಿಡಿಯಾಗಿದ್ದಾಗ ಹಸಿಯಾಗಿ ಸೇವಿಸಲು ಬಳಸಿದರೆ, ಬೆಳೆದು ಹಣ್ಣಾದ ನಂತರದ ಇದನ್ನು ಮಳೆಗಾಲಕ್ಕೆ ಸಂಗ್ರಹಿಸಿಡಲಾಗುತ್ತದೆ. ಹಿಂದಿನ ಕಾಲದಲ್ಲಿ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಸೌತೆಕಾಯಿಗಳನ್ನು ಬೆಳೆದು ಜೋಪಾನವಾಗಿಟ್ಟಕೊಂಡು ಮಳೆಗಾಲದಲ್ಲಿ ಬಳಸುತ್ತಿದ್ದರು. ಇದೀಗ ಅದೆಲ್ಲವೂ ಅಪರೂಪವಾಗಿದೆ. ಆದರೆ ಈ ಸೌತೆಕಾಯಿ ಹಲವು ರೀತಿಯಲ್ಲಿ ಆರೋಗ್ಯಕಾರಿ ಆಗಿರುವುದರಿಂದ ಇದರ ಬಳಕೆ ಮಾಡಿದಷ್ಟು ನಮಗೆ ಅನುಕೂಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಔಷಧೀಯ ಗುಣಗಳ ಆಗರ ಸೌತೆಕಾಯಿಯಲ್ಲಿ ಹಲವು ಬಗೆಗಳಿದ್ದು, ಅವುಗಳಲ್ಲಿ ಔಷಧೀಯ ಗುಣಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದು ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರ ರಸವನ್ನು ತೆಗೆದು ಮುಖ ಕೈಕಾಲು, ಚರ್ಮಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಅಜೀರ್ಣ ಸಮಸ್ಯೆಯಿಂದ ಬಳಲುವವರು ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು. ಕೆಲವೊಮ್ಮೆ ಅಂಗಾಲುಗಳಲ್ಲಿ ಉರಿ ಕಾಣಿಸಿಕೊಂಡರೆ ಸೌತೆಕಾಯಿಯ ತಿರುಳು ತೆಗೆದು ಅದರಿಂದ ಉಜ್ಜಿದರೆ ಶಮನವಾಗುತ್ತದೆ.

ಮೂತ್ರ ಸಮಸ್ಯೆಗೂ ಪರಿಹಾರ ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.

ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಶ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ. ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ಸೌತೆಕಾಯಿಯು ಮೂತ್ರದ ಉರಿ ಶಮನಕಾರಿ ಗುಣ, ವೀರ್ಯ ಶುದ್ಧಿಕಾರಿ ಗುಣ ಹೊಂದಿದ್ದು, ಮಧುಮೇಹಿಗಳು ಕೂಡ ಸೇವಿಸಬಹುದಾಗಿದೆ. ನೂರು ಗ್ರಾಂ ಸೌತೆಕಾಯಿಯಲ್ಲಿ ಏನೇನು ಪೋಷಕಾಂಶಗಳು ಇವೆ ಎಂಬುದನ್ನು ನೋಡಿದ್ದೆಯಾದರೆ ಆರೋಗ್ಯಕ್ಕೆ ಸಹಕಾರಿಯಾಗಿರುವ ಹಲವಾರು ಆರೋಗ್ಯಕಾರಿ ಪೌಷ್ಠಿಕಾಂಶಗಳಿರುವುದು ಗೋಚರಿಸುತ್ತದೆ.

ಹಾಗಾದರೆ ಏನೇನಿದೆ ಎಂಬುದನ್ನು ನೋಡುವುದಾದರೆ ನೂರು ಗ್ರಾಂನಲ್ಲಿ ಶರ್ಕರಪಿಷ್ಠ 2.8ಗ್ರಾಂ, ಸಸಾರಜನಕ 0.4ಗ್ರಾಂ, ಕೊಬ್ಬು 0.56 ಮಿ.ಗ್ರಾಂ, ಸುಣ್ಣ 14.00 ಗ್ರಾಂ, ರಂಜಕ 28.00 ಗ್ರಾಂ, ಕಬ್ಬಿಣ 1.4 ಗ್ರಾಂ, ನಯಾಸಿನ್ 0.4 ಗ್ರಾಂ, ಸಿ ಜೀವಸತ್ವ 8.0 ಗ್ರಾಂ, ಪೊಟ್ಯಾಷಿಯಂ 14.90 ಗ್ರಾಂ, ಸೋಡಿಯಂ 7.0 ಗ್ರಾಂ, ಬಿ ಜೀವಸತ್ವ 28.00 ಗ್ರಾಂ, ಕ್ಲೋರಿನ್ 5.60 ಗ್ರಾಂ, ಗಂಧಕ 5.90ಮಿ.ಗ್ರಾಂ ಇರುವುದನ್ನು ನಾವು ಕಾಣಬಹುದಾಗಿದೆ.

ಒಟ್ಟಾರೆಯಾಗಿ ಸೌತೆಕಾಯಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ತರಕಾರಿಯಾಗಿದ್ದು, ಬೇಸಿಗೆಯ ದಿನಗಳಲ್ಲಿ ನಿತ್ಯದ ಆಹಾರ ಸೇವನೆಯಲ್ಲಿ ಸೌತೆಕಾಯಿಯನ್ನು ಬಳಸಿದರೆ ಆರೋಗ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಸೌತೆಕಾಯಿಯನ್ನು ಬಳಸುವ ಮುನ್ನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೊರೊನಾ ಸೋಂಕು ಜೀವಂತವಾಗಿರುವ ಈ ಕಾಲದಲ್ಲಿ ಎಲ್ಲೆಂದರಲ್ಲಿ ತೆರೆದಿಟ್ಟ, ಕತ್ತರಿಸಿಟ್ಟ ಸೌತೆಕಾಯಿಗಳನ್ನು ಸೇವಿಸುವ ಮುನ್ನ ಎಚ್ಚರಿಕೆ ವಹಿಸುವುದು ಬಹು ಮುಖ್ಯವಾಗಿದೆ.