ಮನೆ ಸುದ್ದಿ ಜಾಲ ಕರಾಮುವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಣಿ ಕುರಿತು ವಿದ್ಯಾಶಂಕರ್ ಅವರಿಂದ ತಪ್ಪು ಮಾಹಿತಿ: ಆರೋಪ

ಕರಾಮುವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಣಿ ಕುರಿತು ವಿದ್ಯಾಶಂಕರ್ ಅವರಿಂದ ತಪ್ಪು ಮಾಹಿತಿ: ಆರೋಪ

0

ಮೈಸೂರು: ಯುಜಿಸಿಯ ದೂರ ಶಿಕ್ಷಣ ಬ್ಯೂರೋ (ಯುಜಿಸಿ ಡಿಇಬಿ) 2018-19ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಶೈಕ್ಷಣಿಕ ಚಟುವಟಿಕೆ ಕುರಿತು ಮೌಲ್ಯಮಾಪನ ನಡೆಸಿ ಅತ್ಯುತ್ತಮ ಶ್ರೇಣಿ ನೀಡಿದೆ. ಆದರೆ, ಈಗಿನ ಕೆಎಸ್‌ಒಯು ಕುಲಪತಿ ಪ್ರೊ.ವಿದ್ಯಾಶಂಕರ್ ಅವರು ಇದು ತಮ್ಮ ಸೇವಾ ಅವಧಿಯ ಸಾಧನೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್. ರಾಮೇಗೌಡ ಆರೋಪಿಸಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಇಂದು ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ರಲ್ಲಿ ನಡೆದ ಚಟುವಟಿಕೆಗಳ ವರದಿ ಆಧರಿಸಿ ಯುಜಿಸಿ ಶ್ರೇಣಿ ನೀಡಿದೆ. ಆ ಅವಧಿಯಲ್ಲಿ ಪ್ರೊ.ಶಿವಲಿಂಗಯ್ಯ ಅವರು ಕರಾಮುವಿವಿ ಕುಲಪತಿ ಆಗಿದ್ದರು. ಹಾಗಾಗಿ ಈಗ ಬಂದಿರುವ ಶ್ರೇಣಿಗೂ ಪ್ರೊ.ಎಸ್.ವಿದ್ಯಾಶಂಕರ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಷ್ಟಕ್ಕೂ ಆ ಅವಧಿಯಲ್ಲಿ ವಿದ್ಯಾಶಂಕರ್ ಕುಲಪತಿ ಆಗಿರಲಿಲ್ಲ ಎಂದು ದೂರಿದರು.

ಕರಾಮುವಿವಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಪ್ರೊ.ವಿದ್ಯಾಶಂಕರ್ ಅವರು ಹಿಂದಿನ ಯಾವ ಕುಲಪತಿಗಳಿಗೂ ಆಹ್ವಾನ ನೀಡದೆ ಅವರನ್ನು ಒಳಗೊಳ್ಳದೆ ಬೆಳ್ಳಿ ಹಬ್ಬ ಮಾಡಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೂರು ಕೊಟ್ಟರೂ ಕ್ರಮವಿಲ್ಲ: ಪ್ರೊ.ವಿದ್ಯಾಶಂಕರ್ ಅವಧಿಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿದೆ. ಲಕ್ಷ ಇದ್ದ ಸಂಖ್ಯೆ ಇದೀಗ 30 ಸಾವಿರಕ್ಕೆ ಬಂದಿದೆ. ಸದ್ಯ ವಿವಿಯಲ್ಲಿ 80 ಬೋಧಕರು ಹಾಗೂ 500 ಬೋಧಕೇತರರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕೆಲಸ ಇಲ್ಲ. ಹೀಗಿರುವಾಗ ವಿದ್ಯಾಶಂಕರ ಅವರು ಹೊಸದಾಗಿ 55 ಜನರನ್ನು ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರಕಾರ ಹಾಗೂ ರಾಜ್ಯಪಾಲರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಸರಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಆಶೀರ್ವಾದ ಇವರ ಮೇಲೆ ಇರುವುದರಿಂದ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.

ವಿದ್ಯಾಶಂಕರ್ ಅವರು ಅನಗತ್ಯವಾಗಿ ಖರ್ಚುವೆಚ್ಚ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ 5 ವರ್ಷದಲ್ಲಿ ವಿವಿ ಮುಚ್ಚಬಹುದು. ಸರಕಾರ ಹಾಗೂ ಯುಜಿಸಿ ತಕ್ಷಣ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಲೇಖನಗಣರಾಜ್ಯೋತ್ಸವ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಮುಂದಿನ ಲೇಖನಕೊರೋನಾ: ದೇಶದಲ್ಲಿಂದು 2.86 ಲಕ್ಷ ಹೊಸ ಕೇಸ್ ಪತ್ತೆ