ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನಾವಲ್ಲ ಅವರು ಎಲ್ಲಾ ವಯಸ್ಕರಿಗೆ ಒಂದು ಡೋಸ್ ಕೋವಿಶೀಲ್ಡ್ ಮುನ್ನೆಚ್ಚರಿಕೆ (ಬೂಸ್ಟರ್) ಲಸಿಕೆಗೆ 600 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಇದರ ಜೊತೆಗೆ ತೆರಿಗೆಗಳನ್ನು ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದರ ಮಧ್ಯೆ Covovax ಅನ್ನು ಔಪಚಾರಿಕವಾಗಿ ಬೂಸ್ಟರ್ ಶಾಟ್ ಎಂದು ಇನ್ನೂ ಘೋಷಣೆ ಆಗಿಲ್ಲ. ಅನುಮೋದನೆ ನಂತರದಲ್ಲಿ ತೆರಿಗೆ ಹೊರತಾಗಿ ಈ ಲಸಿಕೆಗೆ 900 ರೂಪಾಯಿ ದರ ನಿಗದಿಗೊಳಿಸಲಾಗುವುದು. ಈ ಲಸಿಕೆಯನ್ನು ಪ್ರಸ್ತುತ ತುರ್ತು ಸಂದರ್ಭಗಳಲ್ಲಿ ವಯಸ್ಕರಿಗೆ ಮತ್ತು 12-17 ವಯಸ್ಸಿನವರಿಗೆ ನೀಡುವುದಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತವು 2022ರ ಜನವರಿಯಲ್ಲಿ ಆರೋಗ್ಯ ವೃತ್ತಿಪರರು, ಮೊದಲ ಶ್ರೇಣಿ ಕಾರ್ಯಕರ್ತರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಲಸಿಕೆಯನ್ನು ನೀಡುವುದಕ್ಕೆ ಪ್ರಾರಂಭಿಸಲಾಗಿತ್ತು. ಕಳೆದ ಮಾರ್ಚ್ನಲ್ಲಿ ಕೇಂದ್ರವು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ವಿತರಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಈ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಅನ್ನು ಸರ್ಕಾರವು ಉಚಿತವಾಗಿ ನೀಡಲಾಗುತ್ತದೆ. ಆದರೆ ಏಪ್ರಿಲ್ 10ರಂದು ಪ್ರಾರಂಭವಾಗಲಿರುವ ವಯಸ್ಕರ ವಿಷಯದಲ್ಲಿ ಹೀಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲಾಗುವುದಿಲ್ಲ.
ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಘೋಷಿಸಿದೆ. 18 ವರ್ಷ ಮೇಲ್ಪಟ್ಟ ನೀವು ಎರಡನೇ ಡೋಸ್ ಪಡೆದು 9 ತಿಂಗಳು ಆಗಿದ್ದರೆ, ಬೂಸ್ಟರ್ ಡೋಸ್ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತೀರಿ.
ದೇಶದಲ್ಲಿ 15 ವರ್ಷ ಮೇಲ್ಪಟ್ಟವರಲ್ಲಿ ಶೇ.96ರಷ್ಟು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ 15 ವರ್ಷ ಮೇಲ್ಪಟ್ಟ ಶೇ.83ರಷ್ಟು ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಕೊವಿಡ್-19 ಲಸಿಕೆ ವಿತರಣೆ ಪ್ರಾರಂಭವಾಗಿ 447 ದಿನಗಳೇ ಕಡೆದಿದ್ದು, ಇದುವರೆಗೂ 185 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.