ರೋಸೋ (ಡೊಮಿನಿಕಾ): ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ಇಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ವಿಂಡೀಸ್ ತಂಡವನ್ನು ಕೇವಲ 150 ರನ್ಗಳಿಗೆ ಆಲೌಟ್ ಮಾಡಿದ ಭಾರತ, ಬ್ಯಾಟಿಂಗ್ ನಲ್ಲೂ ಮೇಲುಗೈ ಸಾಧಿಸುತ್ತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್, 10 ಓವರ್ ಗಳ ವಿಕೆಟ್ ನಷ್ಟವಿಲ್ಲದೇ 29 ರನ್ ಕಲೆ ಹಾಕಿತ್ತು. ಈ ಸಂದರ್ಭದಲ್ಲಿ ಉತ್ತಮ ಸ್ಕೋರ್ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆರಂಭಿಕ ಬ್ಯಾಟರ್ ತ್ಯಾಗ್ನಾರಾಯಣ ಚಂದ್ರಪಾಲ್ (12) ಅವರನ್ನು ಅಶ್ವಿನ್ ಕ್ಲೀನ್ಬೌಲ್ಡ್ ಮಾಡುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ನಂತರ ವೆಸ್ಟ್ ಇಂಡೀಸ್ ಸತತವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಬ್ರಾಥ್ ವೈಟ್ (20) ಅವರು ಅಶ್ವಿನ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತರೆ, ಶಾರ್ದೂಲ್ ಠಾಕೂರ್ ಎಸೆದ 20ನೇ ಓವರ್ ನಲ್ಲಿ ರೀಫರ್ (2) ಅವರು ವಿಕೆಟ್ ಕೀಪರ್ಗೆ ಕ್ಯಾಚ್ ಕೊಟ್ಟರು. ಭೋಜನ ವಿರಾಮಕ್ಕೂ ಮುನ್ನ ಬ್ಲಾಕ್ ವುಡ್ (14) ಜಡೇಜಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ವಿಂಡೀಸ್ 68/4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿರಾಮದ ನಂತರವೂ ಕಳಪೆ ಪ್ರದರ್ಶನ ಮುಂದುವರೆಸಿದ ವಿಂಡೀಸ್, ಜಡೇಜಾ ಎಸೆದ 32ನೇ ಓವರ್ನಲ್ಲಿ ಜೋಶುವಾ ಡ ಸಿಲ್ವಾ (2) ವಿಕೆಟ್ ಕೀಪರ್ ಇಶಾನ್ ಕಿಶನ್ಗೆ ಕ್ಯಾಚ್ ನೀಡಿದರೆ, ಸಿರಾಜ್ ಎಸೆತದಲ್ಲಿ ಹೋಲ್ಡರ್ (18), ಅಲ್ಜಾರಿ ಜೋಸೆಫ್ (4) ಮತ್ತು ಅಥಾನಾಜೆ ಅವರನ್ನು ಅಶ್ವಿನ್ ಪೆವಿಲಿಯನ್ ಗೆ ಕಳುಹಿಸಿದರು. ಚಹಾ ವಿರಾಮದ ಹೊತ್ತಿಗೆ ವೆಸ್ಟ್ ಇಂಡೀಸ್ ಎಂಟು ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತ್ತು. ಕೊನೆಯ ಸೆಷನ್ನಲ್ಲಿ ಜಡೇಜಾ ಬೌಲಿಂಗ್ ನಲ್ಲಿ ಕೀಮರ್ ರೋಚ್ (1) ಎಲ್ಬಿಡಬ್ಲ್ಯೂ ಆದರು.
ಅಶ್ವಿನ್ 5 ವಿಕೆಟ್ ಪಡೆದು ಪ್ರಮುಖ ಪಾತ್ರವಹಿಸಿದರು. ಜಡೇಜಾ 3, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ರೋಹಿತ್ ಶರ್ಮಾ (30) ಮತ್ತು ಯಶಸ್ವಿ ಜೈಸ್ವಾಲ್ (40) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 70 ರನ್ ಗಳ ಹಿನ್ನಡೆಯಲ್ಲಿದೆ.