ಬೆಂಗಳೂರು: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಳಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕಾಗಿ ಕಾನೂನಿನ ಕೈಗಳಿಗೆ ಇನ್ನಷ್ಟು ಬಲ ನೀಡಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಲ ಹತ್ಯೆ ಪ್ರಕರಣಗಳ ಕುರಿತಾಗಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ದುಡ್ಡಿನ ವ್ಯವಹಾರದ ಕಾರಣಕ್ಕಾಗಿ ನಡೆದಿದೆ ಎನ್ನಲಾದ ಜೈನಮುನಿ ಕಾಮಕುಮಾರ ನಂದಿ ಮಹರಾಜರ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 6 ಗಂಟೆಗಳ ಒಳಗೆ ಬಂಧಿಸಲಾಗಿದೆ. ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ಟಿ. ನರಸೀಪುರದ ವೇಣುಗೋಪಾಲ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಏರೋನಿಕ್ಸ್ ಸಂಸ್ಥೆಯ ಎಂ.ಡಿ ಹಾಗೂ ಸಿ.ಇ.ಒ ಹತ್ಯೆಯ ಆರೋಪಿಗಳನ್ನು ಕೊಲೆ ನಡೆದ 24 ಗಂಟೆಗಳೊಳಗೆ ಬಂಧಿಸಲಾಗಿದೆ. ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ರಾಜ್ಯದ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಈ ಬಗ್ಗೆ ಯಾವ ಸಂದೇಹವೂ ಬೇಡ ಎಂದಿದ್ದಾರೆ.
ಹತ್ಯೆ, ಅಪಹರಣ ಮುಂತಾದ ಅಪರಾಧ ಕೃತ್ಯಗಳು ದುರದೃಷ್ಟಕರ. ಆದರೆ ಒಂದು ಸರ್ಕಾರವಾಗಿ ಇಂಥ ಕಾನೂನು ವಿರೋಧಿ ಕೃತ್ಯಗಳು ನಡೆಯದಂತೆ ತಡೆಯಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.