ಮನೆ ಸುದ್ದಿ ಜಾಲ ಈ ಬಾರಿ ವಾಡಿಕೆಯಂತೆ ನೈಋತ್ಯ ಮುಂಗಾರು

ಈ ಬಾರಿ ವಾಡಿಕೆಯಂತೆ ನೈಋತ್ಯ ಮುಂಗಾರು

0

ನವದೆಹಲಿ: ಈ ಬಾರಿಯ ನೈರುತ್ಯ ಮುಂಗಾರು ವಾಡಿಕೆಯಂತೆ ಇರಲಿದ್ದು, ಉತ್ತರ ಭಾರತದ ಕೆಲವೆಡೆ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಮಾಹಿತಿ ನೀಡಿದೆ.

ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆ ಬೀಳುವುದು. ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

1971–2020ವರೆಗಿನ ದೀರ್ಘಾವಧಿ ಸರಾಸರಿ (ಎಲ್‌ಪಿಎ) ಮಳೆ 87 ಸೆಂ.ಮೀ. ಇದೆ. ಈ ಬಾರಿ ಈ ಎಲ್‌ಪಿಎದ ಶೇ 96ರಿಂದ 104ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

ಈ ಮೊದಲು 1961ರಿಂದ2010ರ ವರೆಗಿನ ಎಲ್‌ಪಿಎ 88 ಸೆಂ.ಮೀ. ಅನ್ನು ಮಾನದಂಡವಾಗಿ ಇಲಾಖೆ ಪರಿಗಣಿಸುತ್ತಿತ್ತು.ಈ ಹಿಂದಿನ ಮೂರು ವರ್ಷಗಳ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಮೇ ಅಂತ್ಯದಲ್ಲಿ ಮತ್ತೊಮ್ಮೆ ನೈರುತ್ಯ ಮಾರುತಗಳ ಪ್ರವೇಶ ಹಾಗೂ ಸಂಭಾವ್ಯ ಮಳೆ ಪ್ರಮಾಣ ಕುರಿತು ಮಾಹಿತಿ ನೀಡಲಿದೆ.