ಮನೆ ರಾಜಕೀಯ ರಾಮನಗರ ಬಂದ್’ಗೆ ನಿಖಿಲ್ ಕುಮಾರಸ್ವಾಮಿ ಬೆಂಬಲ

ರಾಮನಗರ ಬಂದ್’ಗೆ ನಿಖಿಲ್ ಕುಮಾರಸ್ವಾಮಿ ಬೆಂಬಲ

0

ಬೆಂಗಳೂರು: ರಾಮನಗರದ ಮೆಡಿಕಲ್ ಕಾಲೇಜ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡಿರುವ ಬಗ್ಗೆ ಜೆಡಿಎಸ್ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸರಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್  ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ ಎಂದು ಅವರು ಹೇಳಿದ್ದಾರೆ.

2006-07ರಲ್ಲೇ ₹310ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸೇರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಸಮುಚ್ಚಯ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು. ಮತ್ತೆ 25-3-2019ರಂದು ಸಿಎಂ ಆಗಿದ್ದ ಕುಮಾರಣ್ಣ ಅವರು ಆ ಯೋಜನೆಯ ವೆಚ್ಚವನ್ನು ₹540 ಕೋಟಿಗೆ ಹೆಚ್ಚಿಸಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೂ ಪ್ರತ್ಯೇಕ ಮೆಡಿಕಲ್ ಕಾಲೇಜು ಬೇಕು ಎಂದು ಅಂದು ಡಿ.ಕೆ. ಶಿವಕುಮಾರ್ ಅವರೇ ಒತ್ತಡ ಹೇರಿದ್ದರು. 13-12-2018ರಲ್ಲಿ ₹450 ಕೋಟಿ ವೆಚ್ಚದ ಮೆಡಿಕಲ್ ಕಾಲೇಜನ್ನು ಕುಮಾರಣ್ಣ ಅವರು ಕನಕಪುರಕ್ಕೂ ಮಂಜೂರು ಮಾಡಿದ್ದರು ಎಂಬ ಅಂಶವನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

ಬಳಿಕ ಬಿಜೆಪಿ ಸರಕಾರವು ರಾಮನಗರ ಮೆಡಿಕಲ್ ಕಾಲೇಜು ಹಾಗೂ ರಾಜೀವ್ ಗಾಂಧಿ ವಿವಿ ಸಮುಚ್ಚಯ ನಿರ್ಮಾಣಕ್ಕೆ ₹610 ಕೋಟಿ ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಿತ್ತು. ಎರಡು ತಿಂಗಳ ಹಿಂದೆ ಬಂದ ಕಾಂಗ್ರೆಸ್  ಸರಕಾರವು ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಹೈಜಾಕ್ ಮಾಡುವ ಮೂಲಕ ರಾಮನಗರ ಜನತೆಗೆ ದ್ರೋಹ ಎಸಗಿದೆ ಎಂದು ನಿಖಿಲ್ ಅವರು ಕಿಡಿಕಾರಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಒತ್ತಡದಿಂದಲೇ ರಾಮನಗರ ಮೆಡಿಕಲ್  ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾಗಿ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೇ ಹೇಳಿದ್ದರು. ಹಾಗಾದರೆ, ಈ ಸರಕಾರ ಯಾರನ್ನು ಯಾಮಾರಿಸಲು ಹೊರಟಿದೆ. ಡಬಲ್ ಗೇಮ್ ಆಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸುಖಾ ಸುಮ್ಮನೆ ಗೊಂದಲ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.