ಮನೆ ಶಿಕ್ಷಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ: 9ನೇ ತರಗತಿ, ಪ್ರಥಮ ಪಿಯು ಗೆ ಬೋರ್ಡ್ ಪರೀಕ್ಷೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ: 9ನೇ ತರಗತಿ, ಪ್ರಥಮ ಪಿಯು ಗೆ ಬೋರ್ಡ್ ಪರೀಕ್ಷೆ

0

ಬೆಂಗಳೂರು: 5 ಮತ್ತು 8ನೇ ತರಗತಿ ಮಾದರಿಯಲ್ಲೇ 9ನೇ ತರಗತಿಗೂ ಮೌಲ್ಯಾಂಕನ ಪರೀಕ್ಷೆ ಹಾಗೂ ಪ್ರಥಮ ಪಿಯು ಗೆ ವಾರ್ಷಿಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಇದುವರೆಗೂ ಪ್ರಥಮ ಪಿಯುಗೆ ಆಯಾ ಜಿಲ್ಲಾಮಟ್ಟದಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರ ಮೂಲಕ ಎಲ್ಲ ಕಾಲೇಜುಗಳಿಗೂ ಕಳುಹಿಸಿಕೊಡುತ್ತದೆ. ವಿದ್ಯಾರ್ಥಿಗಳು ತಾವು ಓದುತ್ತಿರುವ ಕಾಲೇಜಿನಲ್ಲೇ ಪರೀಕ್ಷೆ ಬರೆಯಲು ಹಾಗೂ ಅದೇ ಕಾಲೇಜಿನ ಉಪನ್ಯಾಸಕರೇ ಮೌಲ್ಯಮಾಪನ ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಲು ಸಮ್ಮತಿಸಲಾಗಿದೆ.

ಕಳೆದ ಶೈಕ್ಷಣಿಕ ಸಾಲಿನಿಂದ ಐದು ಮತ್ತು ಎಂಟನೇ ತರಗತಿಗೆ ಮೌಲ್ಯಂಕನ ಪರೀಕ್ಷೆ ನಡೆಸಲಾಗಿತ್ತು. ಅದನ್ನು ಒಂಬತ್ತನೇ ತರಗತಿಗೆ ವಿಸ್ತರಿಸಲಾಗಿದೆ. ಸಮೀಪದ ಇತರೆ ಶಾಲೆಯ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಿಕೊಳ್ಳಲು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ತಾಲೂಕು ಹಂತದಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ ಯಾರನ್ನೂ ಅನುತ್ತೀರ್ಣಗೊಳಿಸಬಾರದು ಎಂಬ ಶರತ್ತು ವಿಧಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಕಲಿಕಾ ಮಟ್ಟ, ಹಿಂದುಳಿದಿರುವಿಕೆ ಗುರುತಿಸಲು ಹಾಗೂ ಕಲಿಕೆಯಲ್ಲಿ ಹಿಂದುಳಿದವರಿಗೆ ಅಗತ್ಯ ಬೋಧನೆಗೆ ಅವಕಾಶ ಕಲ್ಪಿಸಲಷ್ಟೇ ಮೌಲ್ಯಂಕನ ಮಾಡಲಾಗುತ್ತಿದೆ ಎಂದು ವಿವರಿಸಲಾಗಿದೆ.

9ನೇ ತರಗತಿ ಹಾಗೂ ಪ್ರಥಮ ಪಿಯು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಅಗತ್ಯವಾದ ಅನುದಾನವನ್ನು ಪರೀಕ್ಷಾ ಮಂಡಳಿಯೇ ಬರಿಸಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೇಳಿದೆ.