ಲಕ್ನೋ: ಕಾರು – ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬುಧವಾರ ಮುಂಜಾನೆ (ಅ.4 ರಂದು) ನಡೆದಿದೆ.
ವಾರಣಾಸಿ-ಲಖನೌ ಹೆದ್ದಾರಿಯಲ್ಲಿ ಬನಾರಸ್ ನಿಂದ ಪಿಲಿಭಿತ್ ಕಡೆಗೆ ಹೋಗುತ್ತಿದ್ದ ಕಾರು ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ವಿಪಿನ್ ಯಾದವ್ ಮತ್ತು ಅವರ ತಾಯಿ ಗಂಗಾ ಯಾದವ್, ಮಹೇಂದ್ರ ವರ್ಮಾ ಮತ್ತು ಅವರ ಪತ್ನಿ ಚಂದ್ರಕಾಳಿ, ರಾಜೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಇನ್ನು ಮೂವರ ಗುರುತು ಪರಿಚಯ ಇನ್ನಷ್ಟೇ ಆಗಬೇಕಿದೆ.
ಕಾರಿನ ಚಾಲಕ ಸೇರಿ 8 ಮಂದಿ ಮೃತಪಟ್ಟಿದ್ದು, 3 ವರ್ಷದ ಮಗುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.