ನವದೆಹಲಿ: ದೆಹಲಿಯ ಮಾಳವೀಯ ನಗರದ ಐದು ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು. ಹೋಟೆಲ್‌ನಲ್ಲಿ ಹೆಚ್ಚು ಜನರಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯದ ವರದಿಗಳ ಪ್ರಕಾರ, 30ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ದಟ್ಟಹೊಗೆ ಆವರಿಸಿದ್ದರಿಂದ ಆರಂಭದಲ್ಲಿ ರಕ್ಷಣಾ ಕಾರ್ಯಾಚರಣೆ ಸವಾಲಾಗಿತ್ತು. ಈ ಹೋಟೆಲ್ ಇಕ್ಕಟ್ಟಾದ ಬೀದಿಯಲ್ಲಿದ್ದ ಕಾರಣ, ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ಕಷ್ಟವಾಗಿತ್ತು ಎನ್ನಲಾಗುತ್ತಿದೆ.

ಈ ಕುರಿತು ಬೆಂಕಿ ಮತ್ತು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಕೆಲವರು ಕಟ್ಟಡದ ಮೇಲಿಂದ ಕೆಳಗೆ ಹಾರಿದ್ದಾರೆ. ಸ್ಥಳೀಯರ ಪ್ರಕಾರ, ಸುಮಾರು 25 ರೂಮ್‌ಗಳಿರುವ ಈ ಹೋಟೆಲ್‌ನಲ್ಲಿ ಘಟನೆ ನಡೆದಾಗ ಸಾಕಷ್ಟು ಅತಿಥಿಗಳಿದ್ದರು. ಇವರಲ್ಲಿ ಹೆಚ್ಚಿನವರು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದರು. ಬೆಳಗ್ಗೆ ಹೆಚ್ಚಿನವರು ನಿದ್ದೆಯಲ್ಲಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದ್ದರಿಂದ ಅನಾಹುತದ ತೀವ್ರತೆ ಹೆಚ್ಚಾಗಿದೆ. ಹೋಟೆಲ್‌ನ ಕೆಳ ಅಂತಸ್ತಿನಲ್ಲಿ ಒಂದು ರೆಸ್ಟೋರೆಂಟ್ ಕೂಡ ಇದೆ. ಹೋಟೆಲ್‌ಗೆ ಬೆಂಕಿ ಬಿದ್ದ ತಕ್ಷಣ ನಾನು ಮಾಹಿತಿ ನೀಡಿದೆ. ಹೊರಗೆ ಬಂದು ನೋಡಿದಾಗ ಇಡೀ ಹೋಟೆಲ್‌ಗೆ ಬೆಂಕಿ ಆವರಿಸಿತ್ತು. ಹೇಗೆ ಅಂತ ಗೊತ್ತಿಲ್ಲ, ನಾನು ಹೇಗೋ ಅಲ್ಲಿಂದ ಓಡಿಬಂದು ಪ್ರಾಣ ಉಳಿಸಿಕೊಂಡೆ” ಎಂದು ಹೋಟೆಲ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗುತ್ತಿದೆ.
















