ಮನೆ ಮಕ್ಕಳ ಶಿಕ್ಷಣ ಎರಿಕ್ ಸನ್’ನ 8 ಹಂತಗಳ ಸಿದ್ಧಾಂತ

ಎರಿಕ್ ಸನ್’ನ 8 ಹಂತಗಳ ಸಿದ್ಧಾಂತ

0

ಒಬ್ಬ ವ್ಯಕ್ತಿ ಸಹಜವಾಗಿ ತಾನು ನಡೆದುಕೊಳ್ಳಬೇಕಾದ ರೀತಿಯಲಿಲ್ಲದಿದ್ದರೂ, ಮಾಡಬೇಕಾದ ಕೆಲಸಗಳನ್ನು ಮಾಡಲಾಗದಿದ್ದರೂ, ಭಯ, ನಾಚಿಕೆ, ಆತ್ಮನ್ಯೂನತಾ ಭಾವಗಳಿಂದ ಹಿಂಜರಿಕೆ ಉಂಟಾದರೆ ಅದು ಆತನ ತಪ್ಪಲ್ಲವೆಂದು ಖ್ಯಾತ ಮಾನಸಿಕ ತಜ್ಞ ಡಾ.ಎರಿಕ್ಸ್ ಸನ್ ಹೇಳಿದ್ದಾರೆ. ಕುಟುಂಬದ ಸದಸ್ಯರ ಪೋಷಣ ರೀತಿ, ಸಾಮಾಜಿಕ ಪದ್ಧತಿ, ಅತ್ಮೀಯರ ನಡವಳಿಕೆಗಳು ಆತನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಹಂತ ಹಂತವಾಗಿ ತಿಳಿಸಿ ಅದರ ಪ್ರಭಾವ ಹೇಗಿರುತ್ತದೆ ಎಂದು ತೋರಿಸಿದ್ದಾರೆ. ಒಬ್ಬ ಮನುಷ್ಯನ ವ್ಯಕ್ತಿತ್ವ 8 ಹಂತಗಳಲ್ಲಿ ಯಾವ ರೀತಿಯ ಪ್ರೇರಣೆಯನ್ನು ಉಂಟು ಮಾಡುತ್ತದೆ ಎಂಬುದನ್ನು ಈ ಕೆಳಕಂಡ ರೀತಿಯಲ್ಲಿ ತಿಳಿಸಿದ್ದಾರೆ.

1.  ವಿಶ್ವಾಸ x ಅವಿಶ್ವಾಸ (Trust v/s mistrust)

ಮಗುವಿಗೆ 12ನೇ ತಿಂಗಳಿಂದ 18ನೇ ತಿಂಗಳೊಳಗೆ ಇದು ಏರ್ಪಡುತ್ತದೆ. ತನಗೆ ಹಸಿವಾದಾಗ ಹಾಲು ಕೊಡುವುದು ನಿದ್ದೆ ಬಂದಾಗ ಮಲಗಿಸುವುದು ಪ್ರೀತಿಯಿಂದ ಎತ್ತಿಕೊಂಡು ಮುದ್ದಾಡುವುದು, ಸ್ನಾನಪಾನದಿಗಳ ವಿಷಯದಲ್ಲಿ ಶ್ರದ್ದೆವಹಿಸಿದರೆ ಆ ಮಗುವಿಗೆ ಇದು ತನಗೆ ಸೂಕ್ತ ರಕ್ಷಣೆಯನ್ನುಂಟು ಮಾಡುತ್ತದೆಯೆಂಬ ನಂಬಿಕೆ ಹುಟ್ಟುತ್ತದೆ. ಈ ರೀತಿಯಾಗಲ್ಲದೆ ವಿಭಿನ್ನವಾದ ಪ್ರವರ್ತನೆ ಕಂಡು ಬಂದರೆ ಅಪನಂಬಿಕೆ/ಅವಿಶ್ವಾಸದೊಂದಿಗೆ, ಆತಂಕದಿಂದಿರುತ್ತದೆ. ವಿಶ್ವಾಸ, ವಿಶ್ವಾಸಗಳೆರಡನ್ನೂ ಸಮಸ್ಥಿತಿಯಲ್ಲಿ ನೀಡಿದಾಗ ಮಗುವಿನಲ್ಲಿ ಆಲೋಚನಾಶಕ್ತಿ ಬೆಳೆಯುತ್ತದೆ. ಆಸೆಯನ್ನು ಚಿಗುರಿಸುತ್ತದೆ.

2. ಸ್ವಾತಂತ್ರ್ಯ x ನಾಚಿಕೆ ಸಂಶಯ (Autonomy v/s Shame and doubt)

ಎರಡು ವರ್ಷದಿಂದ ಮೂರುವರೆ ಮೂರನೇ ವರ್ಷದೊಳಗೆ ಮಗು ನಡೆಯುವುದು ವಸ್ತುಗಳನ್ನು ಹಿಡಿದುಕೊಳ್ಳುವುದು ಕೆಳಕ್ಕೆ ಬಿಳಿಸುವುದು, ಮಲಮೂತ್ರಾದಿಗಳ ಸಮಯದಲ್ಲಿ ಸ್ನಾಯುಗಳ ಮೇಲೆ ಹಿಡಿತ ಸಂಪಾದಿಸುವುದು, ಸ್ನಾಯುಗಳ ಮೇಲೆ ತನ್ನ ಮೇಲೆ ಅಧಿಪತ್ಯ ಸಂಪಾದಿಸಿದಾಗ ಸ್ವಾತಂತ್ರ್ಯ ಪಡೆದ ಹಾಗೆ ಹೆಮ್ಮೆಪಟ್ಟುಕೊಳ್ಳುವುದು, ಅದನ್ನು ಸಾಧಿಸಲಾಗದಿದ್ದಾಗ ನಾಚಿಕೆ ಪಡುವುದು ಅಥವಾ ತನಗೆ ಬರೋದಿಲ್ಲವೇನೋ ಎಂಬ ಸಂಶಯಕ್ಕೆ ಸಿಲುಕುತ್ತದೆ. ಇಂತಹ ಸಮಯದಲ್ಲಿ ತಾಯಿಯಾದವಳು ಅತಿ ಕೋಮಲವಾಗಿ ಕಲಿಸಬೇಕೇ ಹೊರತು, ನಿಂದಿಸಬಾರದು.

3. ಸಲುಗೆ x ಅಪರಾಧಿ ಭಾವನೆ (Initiative v/s Guilt)

ಇದು ಮೂರನೇ ವರ್ಷದಿಂದ ಆರನೇ ವರ್ಷದವರೆಗಿನ ಹಂತ. ಈ ಹಂತದಲ್ಲಿ ಮಗು ತನ್ನ ಮೇಲೆ ತಾನು ಸ್ವಾತಂತ್ರ್ಯ ಸಾಧಿಸುತ್ತದೆ. ಕೆಲವು ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕೆಂದು ಪ್ರಯತ್ನಿಸುತ್ತದೆ. ತನ್ನ ವಸ್ತುಗಳನ್ನು ಜೋಡಿಸಿಕೊಳ್ಳುವುದು ಅಡುಗೆಮನೆಯಲ್ಲಿ ತಾಯಿಗೆ ಸಹಾಯ ಮಾಡಲು ಯತ್ನಿಸುತ್ತದೆ. ಆ ಸಮಯದಲ್ಲಿ ಏನಾದರೂ ತಪ್ಪಾದರೆ ಅಪರಾಧಿ ಭಾವನೆಯಿಂದ ಮತ್ತೆ ಅಂತಹ ಪ್ರಯತ್ನವನ್ನು ಮಾಡದಿರಬಹುದು ಅದನ್ನು ಗಮನಿಸಿ ತಾಯಿ ತಂದೆಯರು ಮತ್ತೆ ಪ್ರೇರಣೆಯನ್ನು ಮಾಡಬೇಕು.

4. ಶ್ರಮ x ನ್ಯೂನತಾ (Industry v/s Inferiority)

ಈ ಹಂತ 6 ರಿಂದ 12ನೇ ವರ್ಷದವರೆಗಿರುತ್ತದೆ. ಚೆನ್ನಾಗಿ ಕೆಲಸಗಳನ್ನು ಮಾಡುವುದು, ಕಷ್ಟಪಟ್ಟು ನೈಪುಣ್ಯತೆಯನ್ನು ಬೆಳೆಸಿಕೊಳ್ಳುವುದು. ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆಯುವುದು, ಈ ಹಂತದಲ್ಲೇ ! ಕೇವಲ ಓದೇ ಅಲ್ಲದೆ ಇತರ ಕಾರ್ಯಕಲಾಪಗಳ್ಳಲು ಕೂಡ ಹುಮ್ಮಸ್ಸಿನಿಂದ ಪಾಲ್ಗೊಂಡು ಹೆಸರು ಪಡೆದುಕೊಳ್ಳಲು ಶ್ರಮಿಸುತ್ತಾರೆ. ಈ ಸಮಯದಲ್ಲಿ ತಂದೆ-ತಾಯಿಯರ ಒತ್ತಾಸೆ, ಪ್ರೋತ್ಸಾಹ ತುಂಬಾ ಅಗತ್ಯ. ಮಕ್ಕಳನ್ನು ಮೆಚ್ಚಿಕೊಳ್ಳಬೇಕು. ತಪ್ಪು ಮಾಡಿದರೆ ಬೈಯ್ಯದೆ ಯಾವುದನ್ನು ಸರಿ ಎಂಬುದನ್ನು ತಿಳಿಸಬೇಕು. ಹಾಗಲ್ಲದೆ, ಪ್ರತಿಕೂಲವಾಗಿ ಸ್ಪಂದಿಸಿದರೆ ಅವರಲ್ಲಿ ಇನ್ ಫಿರಿಯಾರಿಟಿಕಾಂಪ್ಲೆಕ್ಸ್, ಅಂದರೆ ಕೀಳರಿಮೆ ಬೆಳೆದು, “ನಾನು ಯಾವ ಕೆಲಸಕ್ಕೂ ಲಾಯಕ್ಕಿಲ್ಲ”, “ನನಗೇನು ಬರುವುದಿಲ್ಲ”, “ನಾನೊಬ್ಬ ವೆಸ್ಟ್” ಎಂಬ ಆಲೋಚನೆಗಳು ಬರಬಹುದು.

5. ಐಡೆಂಟಿಟಿ x ಗೊಂದಲ (Identity v/s Role confusion)

ಇದು ಬಹಳ ಮುಖ್ಯವಾದ ಹಂತ 12ರಿಂದ 18 ವರ್ಷದ ಪ್ರಾಯದೊಳಗಿನವರು ಇದಕ್ಕೊಳಗಾಗುತ್ತಾರೆ. ನಾನು ಯಾರು? ನಾನೇನು ಮಾಡಬೇಕು? ಒಬ್ಬ ಯುವಕನಾಗಿ/ಯುವತಿಯಾಗಿ ನನ್ನ ಜವಾಬ್ದಾರಿ ಏನು? ಈ ಸಮಾಜದಲ್ಲಿ ನನ್ನ ಸ್ಥಾನಮಾನವೇನು? ಎಂಬ ಆಲೋಚನೆಗಳಿಂದ ತನ್ನ ಸುತ್ತಮುತ್ತಲಿರುವವರನ್ನು ಅಧ್ಯಯನ ಮಾಡುತ್ತಾ, ತನ್ನ ವೈಖರಿಯನ್ನ ಬದಲಾಯಿಸಿಕೊಳ್ಳುತ್ತಾ, ಸಮಾಜದಲ್ಲಿ ಒಂದಾಗಲು ಪ್ರಯತ್ನಿಸುವ ವಯಸ್ಸು. ಈ ಹಂತದಲ್ಲಿ ಕುಟುಂಬದ ಸದಸ್ಯರು, ಅಧ್ಯಾಪಕರು, ಕುಲಬಾಂಧವರು ಹಾಗೂ ಸಮಾಜದ ಇತರರು, ಅವನು/ಅವಳಿಗೆ ಸಹಕರಿಸಬೇಕು. ಹಾಗಲ್ಲದೆ ಹಿರಿಯರು “ನಿನಗೇನು ಗೊತ್ತಿಲ್ಲ”, “ನೀನು ಸ್ವಲ್ಪ ಬಾಯಿ ಮುಚ್ಚಿಕೊಂಡಿರು”, “ನಿನ್ನಿಂದ ಯಾವ ಕೆಲಸಾನು ಮಾಡಕ್ಕಾಗುವುದಿಲ್ಲ”, “ನೀನು ಏಕಾದರೂ ಹುಟ್ಟಿದೆಯೋ ಭೂಮಿಗೆ ಭಾರವಾಗಿ… ನೀನು ಒಬ್ಬ ಮನುಷ್ಯನಾ…?” ಎಂಬಂತಹ ಮಾತುಗಳನ್ನು ಅವನನ್ನು ಗೊಂದಲದ ಗೂಡಿಗೆ ತಳ್ಳಿಬಿಡುತ್ತದೆ. ಸಮಾಜದಲ್ಲಿ ತನ್ನ ಪಾತ್ರವೇನು, ಏನು ಗೊತ್ತಾಗದೆ, ತಾನು ಹೇಗಿರಬೇಕೋ, ಹೇಗಿರಬಾರದು, ಹೇಗೆ ಮಾತನಾಡಬೇಕು, ಯಾರೊಂದಿಗೆ ಹೇಗೆ ವರ್ತಿಸಬೇಕು, ತಿಳಿಯದೆ ಕೊನೆಗೆ ಸಮಾಜಕ್ಕೆ ಅಲ್ಲ ತಾನೇ ಗೊಂದಲದಲ್ಲಿಇರುತ್ತಾನೆ.